ಮುಝಫ್ಫರನಗರ ದಲಿತರ ಹಂತಕರನ್ನು 24 ಗಂಟೆಗಳಲ್ಲಿ ಬಂಧಿಸದಿದ್ದರೆ ಬಂದ್‌ಗೆ ಕರೆ: ಭೀಮ್ ಆರ್ಮಿ ಎಚ್ಚರಿಕೆ

Update: 2018-09-12 14:24 GMT

ಲಕ್ನೋ,ಸೆ.12: ಜಿಲ್ಲೆಯ ಬುಧಾನಾ ಮತ್ತು ಪುರ್ಕಾಜಿ ಪ್ರದೇಶಗಳಲ್ಲಿ ಇತ್ತೀಚಿಗೆ ಕೊಲೆಯಾದ ಇಬ್ಬರು ದಲಿತ ಯುವಕರ ಹಂತಕರನ್ನು 24 ಗಂಟೆಗಳಲ್ಲಿ ಬಂಧಿಸದಿದ್ದರೆ ಮುಝಫ್ಫರನಗರ ಬಂದ್‌ಗೆ ಕರೆ ನೀಡುವುದಾಗಿ ಭೀಮ್ ಆರ್ಮಿಯು ಬೆದರಿಕೆಯನ್ನೊಡ್ಡಿದೆ.

ಕಾಲೇಜು ವಿದ್ಯಾರ್ಥಿ ರಜತ್(22) ಎಂಬಾತನ ಶವ ಸೋಮವಾರ ಸಂಜೆ ಪುರ್ಕಾಜಿಯ ಆತನ ನಿವಾಸದಿಂದ ಅರ್ಧ ಕಿ.ಮೀ.ದೂರದಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಆತ ಕಾಲೇಜಿನಿಂದ ಮನೆಗೆ ಮರಳುತ್ತಿದ್ದಾಗ ಆತನ ಹತ್ಯೆ ನಡೆದಿತ್ತು. ಶನಿವಾರ ಬುಧಾನಾದ ಹೊಲವೊಂದರಲ್ಲಿ ಕಪಿಲ್ ಜಾಟವ್(23) ಎಂಬಾತನ ಶವ ಪತ್ತೆಯಾಗಿದ್ದು,ಉಸಿರುಗಟ್ಟಿಸಿ ಕೊಂದ ಕುರುಹುಗಳಿದ್ದವು.

ಯುವಕರ ಹತ್ಯೆಗಳಿಗೆ ಯಾವುದೇ ಕಾರಣಗಳಿರಲಿಲ್ಲ,ಅವರು ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ ಎಂದು ಎರಡೂ ಪ್ರಕರಣಗಳಲ್ಲಿ ಕುಟುಂಬಸ್ಥರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಲಿತ ಸಮುದಾಯವು ಏಳಿಗೆ ಹೊಂದುವುದ್ನು ತಡೆಯಲು ಗೌರವಪೂರ್ಣ ಬದುಕಿಗಾಗಿ ಹೋರಾಡುತ್ತಿರುವ ದಲಿತ ಯುವಕರನ್ನು ಕೊಲ್ಲಲಾಗುತ್ತಿದೆ ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್‌ನ ವಕ್ತಾರ ಮಂಜೀತ್ ಸಿಂಗ್ ನೌಟಿಯಾಲ್ ಹೇಳಿದರು.

ಬೀದಿ ವ್ಯಾಪಾರಿಯಾಗಿದ್ದ ಕಪಿಲ್‌ನನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಮತ್ತು ಆತನ ತಲೆಯಲ್ಲಿ ಮೊಂಡುವಸ್ತುವಿನಿಂದ ಹೊಡೆದ ಗಾಯದ ಗುರುತು ಇತ್ತು ಎಂದು ಮರಣೋತ್ತರ ಪರೀಕ್ಷೆಯ ವರದಿಯು ತಿಳಿಸಿದೆ. ಈ ಬಗ್ಗೆ ನಾವು ಸ್ಥಳೀಯ ಯುವಕರನ್ನು ಪ್ರಶ್ನಿಸುತ್ತಿದ್ದೇವೆ ಎಂದು ಬುಧಾನಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News