ಶಾಸಕ/ ಸಂಸದರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸಲು ಸುಪ್ರೀಂ ಸೂಚನೆ

Update: 2018-09-12 14:44 GMT

ಹೊಸದಿಲ್ಲಿ, ಸೆ.12: ಸಂಸದರು ಹಾಗೂ ಶಾಸಕರಿಗೆ ಸಂಬಂಧಿಸಿದ , ವಿಚಾರಣೆಗೆ ಬಾಕಿ ಉಳಿದಿರುವ ಪ್ರಕರಣಗಳ ವಿವರವನ್ನು ಒದಗಿಸುವಂತೆ ಎಲ್ಲಾ ರಾಜ್ಯಗಳ ಕಾರ್ಯದರ್ಶಿಗಳಿಗೆ, ಹೈಕೋರ್ಟ್‌ಗಳ ಪ್ರಧಾನ ನೋಂದಣಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಇಂತಹ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ 2017ರಲ್ಲಿ ತಾನು ನೀಡಿದ್ದ ಆದೇಶವನ್ನು ಪಾಲಿಸಲಾಗಿದೆಯೇ ಮತ್ತು ವಿಶೇಷ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆಯೇ ಎಂಬುದರ ಬಗ್ಗೆಯೂ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ರಂಜನ್ ಗೊಗೋಯ್, ನವೀನ್ ಸಿನ್ಹಾ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠ ತಿಳಿಸಿದೆ. ತನ್ನ ಆದೇಶದ ಪಾಲನೆಯಾಗಿದೆಯೇ ಎಂಬುದನ್ನು ಆಗಿಂದಾಗ್ಗೆ ಗಮನಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಸೆ.11ರಂದು ಸುಪ್ರೀಂಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಿದ್ದ ಕೇಂದ್ರ ಕಾನೂನು ಮತ್ತು ಸಾಮಾಜಿಕ ನ್ಯಾಯ ಸಚಿವಾಲಯ, 1,233 ಕ್ರಿಮಿನಲ್ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಇದರಲ್ಲಿ 136 ಪ್ರಕರಣ ಇತ್ಯರ್ಥಗೊಳಿಸಿದ್ದು 1,097 ಬಾಕಿಯಿದೆ ಎಂದು ವಿವರ ನೀಡಿತ್ತು. ಆದರೆ ಈ ಮಾಹಿತಿ ತೃಪ್ತಿಕರವಾಗಿಲ್ಲ ಎಂಬ ಕಾರಣಕ್ಕೆ ಇದೀಗ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ನೋಂದಣಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ವಿಶೇಷ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಸುಪ್ರೀಂಕೋರ್ಟ್ ಗಮನಿಸಬೇಕು ಎಂದು ಕೋರಿ ಅಶ್ವಿನಿ ಉಪಾಧ್ಯಾಯ ಎಂಬವರು ಅರ್ಜಿ ಸಲ್ಲಿಸಿದ್ದರು. ಲೈಂಗಿಕ ದೌರ್ಜನ್ಯದಿಂದ ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರಗಳು ಸ್ಥಾಪಿಸಿರುವ ಪೋಕ್ಸೊ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಅವರು ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News