ಪದ್ಮಭೂಷಣ ವಿಜೇತ ಅರ್ಥಶಾಸ್ತ್ರಜ್ಞ ಪ್ರೊ.ವಿ.ಎಸ್.ವ್ಯಾಸ ವಿಧಿವಶ

Update: 2018-09-12 15:23 GMT

ಜೈಪುರ, ಸೆ.12: ಪದ್ಮಭೂಷಣ ವಿಜೇತ ಕೃಷಿ ಅರ್ಥಶಾಸ್ತ್ರಜ್ಞ ಪ್ರೊ.ವಿ.ಎಸ್.ವ್ಯಾಸ ಅವರು ಬುಧವಾರ ಜೈಪುರದಲ್ಲಿ ನಿಧನ ಹೊಂದಿದ್ದಾರೆ. 87ರ ಹರೆಯದ ವ್ಯಾಸ ಅವರು, ಪತ್ನಿ ಲಕ್ಷ್ಮಿ ಮತ್ತು ಇಬ್ಬರು ಪುತ್ರರಾದ ಡಾ. ವಿಕ್ರಮ ವ್ಯಾಸ ಮತ್ತು ರಾಜೀವ್ ವ್ಯಾಸರನ್ನು ಅಗಲಿದ್ದಾರೆ. ವ್ಯಾಸ ಅವರು ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿದ್ದರು. ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಒಪ್ಪದ ಅವರು ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಅವರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಜೊತೆಯಾಗಿದ್ದ ಕವಿತಾ ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರೊ.ವ್ಯಾಸ ಅವರು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಓರ್ವ ಸ್ವತಂತ್ರ ಅರ್ಥಶಾಸ್ತ್ರಜ್ಞರಾಗಿದ್ದ ವ್ಯಾಸ ಅವರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಡಾ. ಮನಮೋಹನ ಸಿಂಗ್ ಅವರ ಜೊತೆ ಕೆಲಸ ಮಾಡಿದ್ದಾರೆ. ಅವರು ಅಹ್ಮದಾಬಾದ್‌ನ ಭಾರತೀಯ ಮ್ಯಾನೆಜ್ಮೆಂಟ್ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರ ಮಂಡಳಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿಶ್ವ ಬ್ಯಾಂಕ್‌ಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿಯೂ ಪ್ರೊ. ವ್ಯಾಸ ಕಾರ್ಯನಿರ್ವಹಿಸಿದ್ದಾರೆ. ವಿಶ್ವಬ್ಯಾಂಕ್‌ನಿಂದ ಹೊರಬಂದ ನಂತರ ವ್ಯಾಸ ಅವರು, ಮಾಹಿತಿ ಹಕ್ಕು ಕಾಯ್ದೆ, ಆಹಾರದ ಹಕ್ಕು ಅಭಿಯಾನ, ನರೆಗ ಹಾಗೂ ಇತರ ಸಾಮಾಜಿಕ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News