​ಅತ್ಯಾಚಾರ ಆರೋಪಿ ಬಿಷಪ್‌ಗೆ ಪೊಲೀಸ್ ಸಮನ್ಸ್

Update: 2018-09-13 05:14 GMT

ಕೊಚ್ಚಿನ್, ಸೆ. 13: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಜಲಂಧರ್ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಕಾವು ಹೆಚ್ಚುತ್ತಿರುವ ನಡುವೆಯೇ ಕೇರಳ ಪೊಲೀಸರು, ಎರಡನೇ ಸುತ್ತಿನ ವಿಚಾರಣೆಗೆ ಈ ತಿಂಗಳ 19ರಂದು ಹಾಜರಾಗುವಂತೆ ಆರೋಪಿ ಬಿಷಪ್‌ಗೆ ಸಮನ್ಸ್ ನೀಡಿದ್ದಾರೆ.

ಅತ್ಯಾಚಾರ ಸಂತ್ರಸ್ತೆ ಪೋಪ್ ಅವರಿಗೆ ದೂರು ನೀಡಿ ಬರೆದ ಪತ್ರ ಬಹಿರಂಗವಾದ ಮರುದಿನವೇ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.

ತನಿಖಾ ತಂಡದ ಜತೆ ಪರಾಮರ್ಶನಾ ಸಭೆ ನಡೆಸಿದ ಕೊಚ್ಚಿನ್ ವಲಯ ಐಜಿಪಿ ವಿಜಯ್ ಸಾಖರೆ, "ಪ್ರಕರಣದಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಬಿಷಪ್‌ಗೆ ಸೂಚಿಸಲಾಗಿದೆ. ಹೇಳಿಕೆಯಲ್ಲಿ ಇರುವ ಕೆಲ ವೈರುದ್ಧ್ಯಗಳನ್ನು ಸರಿಪಡಿಸಿದ ಬಳಿಕವಷ್ಟೇ ಬಿಷಪ್ ಬಂಧನದ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ" ಎಂದು ಸ್ಪಷ್ಟಪಡಿಸಿದ್ದಾರೆ.

"ಅರ್ಜಿದಾರರು, ಆರೋಪಿ ಹಾಗೂ ಸಾಕ್ಷಿಗಳು ಸೇರಿದಂತೆ ಪ್ರತಿಯೊಬ್ಬರ ಹೇಳಿಕೆಗಳಲ್ಲೂ ವೈರುದ್ಧ್ಯಗಳಿವೆ. ಈ ವೈರುದ್ಧ್ಯಗಳನ್ನು ಗುರುತಿಸಿ, ಇದನ್ನು ಬಗೆಹರಿಸಿ ಹೇಗೆ ದೃಢೀಕರಿಸಿಕೊಳ್ಳಬಹುದು ಎಂಬ ಬಗ್ಗೆ ಚಿಂತನೆ ನಡೆದಿದೆ" ಎಂದು ಅವರು ಹೇಳಿದ್ದಾರೆ. ಕೊಟ್ಟಾಯಂನ ಎತ್ತುಮನೂರಿನಲ್ಲಿರುವ ಹೈಟೆಕ್ ವಿಚಾರಣಾ ಸೌಲಭ್ಯವನ್ನು ಬಳಸಿಕೊಂಡು ಬಿಷಪ್ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ವಿಚಾರಣೆ ನಿಧಾನಗತಿಯಲ್ಲಿ ಸಾಗಿದೆ ಎಂಬ ಆರೋಪವನ್ನು ಐಜಿ ನಿರಾಕರಿಸಿದ್ದಾರೆ. "ಪ್ರತಿ ದಿನವೂ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಆಗಿರುವ ಪ್ರಗತಿ ಬಗ್ಗೆ ಗುರುವಾರ ನ್ಯಾಯಾಲಯಕ್ಕೆ ವಿವರ ನೀಡಲಾಗುವುದು" ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News