×
Ad

ಪ್ರವಾಹ: ಕೇಂದ್ರದಿಂದ 4,700 ಕೋಟಿ ರೂ. ನೆರವು ಕೋರಿದ ಕೇರಳ

Update: 2018-09-13 21:29 IST

ಹೊಸದಿಲ್ಲಿ, ಸೆ.13: ರಾಜ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗೆ ತಕ್ಷಣ ನೆರವು ನೀಡುವಂತೆ ಕೇರಳ ಸರಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ. ರಾಜ್ಯದಲ್ಲಿ ಪ್ರವಾಹದಿಂದ 488 ಮಂದಿ ಜೀವ ಕಳೆದುಕೊಂಡಿದ್ದು, 14 ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ ಎಂದು ಮನವಿಪತ್ರದಲ್ಲಿ ವಿವರಿಸಲಾಗಿದೆ.

ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಪತ್ರದಲ್ಲಿ, ರಾಜ್ಯದಲ್ಲಿ ಆಗಿರುವ ಜೀವಹಾನಿ, ಆಸ್ತಿ ಪಾಸ್ತಿ ನಷ್ಟ, ಮೂಲಸೌಕರ್ಯ ಮತ್ತು ಕೃಷಿ ಬೆಳೆಗಳಿಗೆ ಆಗಿರುವ ಹಾನಿಯನ್ನು ಭರ್ತಿ ಮಾಡುವ ಸಲುವಾಗಿ 4,700 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಲಾಗಿದೆ.

ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಪರಿಹಾರ ಕಾರ್ಯಾಚರಣೆಗೆ ತಲುಗುವ ವೆಚ್ಚ ರಾಜ್ಯದ ಸಾಮರ್ಥ್ಯವನ್ನು ಮೀರಿದ ಸಂದರ್ಭದಲ್ಲಿ ಕೇಂದ್ರದಿಂದ ನೆರವು ಕೋರಲಾಗುತ್ತದೆ. ಇದರ ಅನ್ವಯ ಕೇರಳ ಸರ್ಕಾರ ಕೂಡಾ ಮನವಿ ಸಲ್ಲಿಸಿದೆ. ಹಾಲಿ ಇರುವ ಮಾರ್ಗಸೂಚಿಯ ಪ್ರಕಾರ, ಕೇಂದ್ರ ಸರ್ಕಾರ ಅಂತರ ಸಚಿವಾಲಯ ಕೇಂದ್ರ ತಂಡವನ್ನು ಕಳುಹಿಸಿ ಆಗಿರುವ ಹಾನಿ ವಿವರಗಳನ್ನು ಅಂದಾಜಿಸುತ್ತದೆ ಹಾಗೂ ಹೆಚ್ಚುವರಿಯಾಗಿ ಅಗತ್ಯವಿರುವ ನೆರವನ್ನು ಶಿಫಾರಸ್ಸು ಮಾಡುತ್ತದೆ.

ಈ ವರದಿಯನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿ ಪರಿಶೀಲಿಸುತ್ತದೆ. ಬಳಿಕ ವರದಿಯನ್ನು ಗೃಹ ಸಚಿವರ ನೇತೃತ್ವದ ಉನ್ನತ ಮಟ್ಟದ ಸಮಿತಿ ಪರಿಶೀಲಿಸಿ, ಎನ್‍ಡಿಆರ್‍ಎಫ್‍ನಿಂದ ಹೆಚ್ಚುವರಿ ನೆರವಿನ ಪ್ರಮಾಣವನ್ನು ಅನುಮೋದಿಸುತ್ತದೆ. ಇಂತಹ ವಿಕೋಪಗಳು ಸಂಭವಿಸಿದಾಗ, ಪರಿಹಾರ ಮತ್ತು ನೆರವು ಕಾರ್ಯಾಚರಣೆಗೆ ರಾಜ್ಯ ವಿಕೋಪ ಸ್ಪಂದನೆ ನಿಧಿ ಮತ್ತು ರಾಷ್ಟ್ರೀಯ ವಿಕೋಪ ಸ್ಪಂದನೆ ನಿಧಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಪ್ರತಿ ರಾಜ್ಯಗಳಲ್ಲಿ ರಾಜ್ಯ ವಿಕೋಪ ಸ್ಪಂದನೆ ನಿಧಿ ಸ್ಥಾಪಿಸಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಶೇಕಡ 75ರಷ್ಟು ನೆರವು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News