ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಿಂದ ರಾಮರಥ ಯಾತ್ರೆ… !

Update: 2018-09-14 05:55 GMT

ಹೊಸದಿಲ್ಲಿ, ಸೆ.14: ಮುಂದಿನ ಲೋಕಸಭಾ  ಚುನಾವಣೆಯಲ್ಲಿ  ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿರುವ ಕಾಂಗ್ರೆಸ್ ಇದೀಗ  ಬಿಜೆಪಿಯಂತೆ  ರಾಮರಥಯಾತ್ರೆ ಯನ್ನು ಕೈಗೊಳ್ಳಲು ನಿರ್ಧರಿಸಿದೆ.
28 ವರ್ಷಗಳ ಹಿಂದೆ  ಬಿಜೆಪಿ  ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ನಾಯಕತ್ವದಲ್ಲಿ ರಾಮರಥ ಯಾತ್ರೆ  ಕೈಗೊಂಡು ಅಪೂರ್ವ ಯಶಸ್ಸು ಸಾಧಿಸಿತ್ತು. ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.  ಅಡ್ವಾಣಿಗೆಅಂದು ರಾಮರಥಯಾತ್ರೆಗೆ  ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಥ್ ನೀಡಿದ್ದರು.
ಇದೀಗ  ಬಿಜೆಪಿಯ  ಅಸ್ತ್ರವನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ. ಸಾಫ್ಟ್  ಹಿಂದುತ್ವದ ಅಸ್ತ್ರವನ್ನು ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಪ್ರಯೋಗ ಮಾಡಲಿದೆ.  

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನ ರಥಯಾತ್ರೆ ಸಂಚರಿಸಲಿದ್ದು,  ಯಾತ್ರೆಯ ರೂಪುರೇಷೆಗಳನ್ನು   ಅಂತಿಮಗೊಳಿಸಲಾಗಿದೆ .ಶ್ರೀರಾಮ ವನವಾಸಕ್ಕೆ ತೆರಳಿದ ದಾರಿಯಲ್ಲಿ ಕಾಂಗ್ರೆಸ್ ನ ರಾಮರಥ ಯಾತ್ರೆ ಸಾಗಲಿದೆ ಎಂದು ಮೂಲಗಳು ತಿಳಿಸಿವೆ.
ರಾಮ ವನವಾಸಕ್ಕೆ ತೆರಳಿದ ದಾರಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಬಿಜೆಪಿ ದಶಕದ ಹಿಂದೆ ಭರವಸೆ ನೀಡಿತ್ತು. ಆದರೆ ಆ ನಿಟ್ಟಿನಲ್ಲಿ ಗಮನ ಹರಿಸಲಿಲ್ಲ. ಕಾಂಗ್ರೆಸ್    ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ರಾಮ ವನವಾಸ ಕೈಗೊಂಡ ದಾರಿಯಲ್ಲಿ ರಸ್ತೆ ನಿರ್ಮಿಸಲಿದೆ ಎಂದು  ಹೇಳುವ ಮೂಲಕ ಬಿಜೆಪಿಗೆ ಆಘಾತ ನೀಡಿದೆ.
ಮುಂದಿನ ಚುನಾವಣೆಯಲ್ಲಿ ರಾಮನ ಆಶೀರ್ವಾದ ಪಡೆಯಲು ಕಾಂಗ್ರೆಸ್ ನಿರ್ಧರಿಸಿದೆ.  ರಾಮ ವನವಾಸ ಯಾತ್ರೆ ಕೈಗೊಂಡ ದಾರಿಯಲ್ಲಿ ರಾಮರಥ ಯಾತ್ರೆ ಕೈಗೊಳ್ಳಲಾಗುವುದು  ಎಂದು ಈ ಯೋಜನೆಯ ರೂವಾರಿ ಕಾಂಗ್ರೆಸ್ ನಾಯಕ ಹರಿಶಂಕರ್  ಶುಕ್ಲಾ ಮಾಹಿತಿ ನೀಡಿದ್ದಾರೆ.

ಚಿತ್ರಕೂಟದಿಂದ ರಾಮರಥ ಯಾತ್ರೆ ಹೊರಡಲಿದ್ದು,  ರಥದಲ್ಲಿ ಹಿಂದೂ ಸಂತರು ಇರುತ್ತಾರೆ. ರಥಯಾತ್ರೆ ವೇಳೆ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹರಿಶಂಕರ್  ಶುಕ್ಲಾ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಹಿಂದೂಗಳನ್ನು ಓಲೈಸಿಕೊಳ್ಳಲು ನಾನಾ ಯೋಜನೆಗಳನ್ನು ರೂಪಿಸಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News