ಮದ್ಯಪಾನಿಗಳನ್ನು ಮನೆಗೆ ತಲುಪಿಸಲು ಆ್ಯಂಬುಲೆನ್ಸ್ ಸೇವೆ ಆರಂಭಿಸಿದ ಭೂಪ !

Update: 2018-09-14 08:40 GMT

ಹೈದರಾಬಾದ್, ಸೆ.14: ತೆಲಂಗಾಣದಲ್ಲಿ ಚುನಾವಣಾ ಋತು ಪಾನಪ್ರಿಯರಿಗೂ ಬಹಳ ಇಷ್ಟವಾದ ಸಮಯವಾಗಿದ್ದು, ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಹಾಗೂ ಮತದಾರರನ್ನು ಓಲೈಸಲು ಮದ್ಯ ಪೂರೈಕೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಆದರೆ ಕಂಠಪೂರ್ತಿ ಕುಡಿದು ಮದ್ಯದ ನಶೆಯಲ್ಲಿ ವಾಹನ ಚಲಾಯಿಸಿದ್ದಕ್ಕೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ ದೊಡ್ಡ ಮೊತ್ತದ ದಂಡ ಪಾವತಿಸಬೇಕಾದ ಅನಿವಾರ್ಯತೆಯೂ ಇದೆ. ಇಂತಹ ಕಾರ್ಯಕರ್ತರ ಸಹಾಯಕ್ಕೆಂದೇ ಮೇದಕ್ ಜಿಲ್ಲೆಯ ಜಂಗಮ್ರಯಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಅವುಲ ಗೋಪಾಲ ರೆಡ್ಡಿ ಹೊಸ ಪರಿಹಾರ ಕಂಡುಕೊಂಡಿದ್ದಾರೆ. ಅವರು ತಮ್ಮ ಕಾರನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ ಇಂತಹ ಮದ್ಯದ ನಶೆಯಲ್ಲಿರುವ ಜನರು ಅಪಘಾತಕ್ಕೀಡಾಗದಂತೆ ಹಾಗೂ ಪೊಲೀಸರ ಕೈಗೆ ಸಿಕ್ಕಿ ಬೀಳದಂತೆ ತಮ್ಮ ವಾಹನದಲ್ಲಿ  ಅವರನ್ನು ಮನೆಗೆ ಸಾಗಿಸುತ್ತಾರೆ. ಅವರ ಈ ವಿನೂತನ ಸೌಲಭ್ಯ ಇತ್ತೀಚೆಗೆ ಚಿನ್ನ ಸಂಕರಂಪೇಟೆಯಲ್ಲಿ ಉದ್ಘಾಟನೆಗೊಂಡಿತು,

ವೈನ್ ಶಾಪ್ ಗಳಲ್ಲಿ ಹಾಗೂ ಬಾರ್ ಗಳಲ್ಲಿ ಮದ್ಯ ಸೇವಿಸಿ ನಂತರ ಸುರಕ್ಷಿತವಾಗಿ ಮನೆಗೆ ತಲುಪಬಯಸುವವರು ತನ್ನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಅವರನ್ನು ಅವರಿರುವ ಸ್ಥಳದಿಂದ ನಿವಾಸಕ್ಕೆ ಉಚಿತವಾಗಿ ತಲುಪಿಸುವುದಾಗಿ ರೆಡ್ಡಿ ಹೇಳುತ್ತಾರೆ.

ತಾನು ಯಾವತ್ತೂ ಮದ್ಯ ಮುಟ್ಟಿಲ್ಲ ಎಂದು ಹೇಳುವ ರೆಡ್ಡಿ ತೆಲಂಗಾಣ ತಗುಬೊತುಲ ಸಮಿತಿ ಅಥವಾ ತೆಲಂಗಾಣ ಪಾನಪ್ರಿಯರ ಸಮಿತಿ ಕೂಡ ರಚಿಸಿದ್ದರೂ ತಾನು ಮದ್ಯ ಸೇವನೆಯನ್ನು ಪ್ರೋತ್ಸಾಹಿಸುವುದಾಗಿ ಇದರರ್ಥವಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

ಮದ್ಯದ ನಶೆಯಲ್ಲಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸದೆ ಅವರನ್ನು ಒಂದೋ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಇಲ್ಲವೇ ರಾತ್ರಿ ಪೊಲೀಸ್ ಠಾಣೆಯಲ್ಲಿ ಉಳಿದುಕೊಳ್ಳುವ ಏರ್ಪಾಟು ಮಾಡಬೇಕು ಎಂದು ಹೇಳುವ ರೆಡ್ಡಿ, ಜನರು ಮದ್ಯಪಾನ ನಿಷೇಧಿಸುವ  ಇಲ್ಲವೇ ಪಾನಪ್ರಿಯರನ್ನು ಉಚಿತವಾಗಿ ಮನೆಗೆ ತಲುಪಿಸಲು ಏರ್ಪಾಟು ಮಾಡುವ ಆಶ್ವಾಸನೆ ನೀಡುವ ರಾಜಕೀಯ ಪಕ್ಷಗಳಿಗೆ ಮಾತ್ರ  ಮತ ನೀಡಬೇಕೆಂದೂ ಆಗ್ರಹಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News