ಟೆರಿ ಮಾಜಿ ಅಧ್ಯಕ್ಷ ಆರ್.ಕೆ.ಪಚೌರಿ ವಿರುದ್ಧ ಆರೋಪ ರೂಪಿಸಲು ನ್ಯಾಯಾಲಯದ ಆದೇಶ

Update: 2018-09-14 13:14 GMT

ಹೊಸದಿಲ್ಲಿ, ಸೆ.14: ದಿ ಎನರ್ಜಿ ಆ್ಯಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್(ಟೆರಿ)ನ ಮಾಜಿ ಅಧ್ಯಕ್ಷ ಆರ್.ಕೆ.ಪಚೌರಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ರೂಪಿಸುವಂತೆ ದಿಲ್ಲಿಯ ಮಹಾನಗರ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ. 2015,ಫೆಬ್ರವರಿಯಲ್ಲಿ ಪಚೌರಿ ವಿರುದ್ಧ ಮಾಜಿ ಮಹಿಳಾ ಸಹೋದ್ಯೋಗಿ ಯೋರ್ವರು ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮಾ.21ರಂದು ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

ಆದರೆ ಪಚೌರಿ ವಿರುದ್ಧದ ಕೆಲವು ಆರೋಪಗಳನ್ನು ಕೈಬಿಟ್ಟ ನ್ಯಾ.ಚಾರು ಗುಪ್ತಾ ಅವರು ಅ.20ರಂದು ವಿಧ್ಯುಕ್ತವಾಗಿ ಆರೋಪಗಳನ್ನು ರೂಪಿಸುವುದಾಗಿ ತಿಳಿಸಿದರು.

ಈ ಹಿಂದೆ ಪಚೌರಿಯವರ ಕೋರಿಕೆಯ ಮೇರೆಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಪ್ರಕರಣದ ಬಗ್ಗೆ ವರದಿ ಮಾಡುವಾಗ ‘ಯಾವುದೇ ನ್ಯಾಯಾಲಯದಲ್ಲಿ ಆರೋಪಗಳು ಸಾಬೀತಾಗಿಲ್ಲ ಮತ್ತು ಅವು ಸರಿಯಲ್ಲದಿರಬಹುದು’ ಎಂಬ ಶೀರ್ಷಿಕೆಯನ್ನು ಕಡ್ಡಾಯವಾಗಿ ತೋರಿಸುವಂತೆ ಮಾಧ್ಯಮ ಸಂಸ್ಥೆಗಳಿಗೆ ಆದೇಶಿಸಿತ್ತು.

2016,ಮಾ.1ರಂದು ನ್ಯಾಯಾಲಯದಲ್ಲಿ ಪಚೌರಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದ ದಿಲ್ಲಿ ಪೊಲೀಸರು,ಅವರು ದೂರುದಾರರಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದರು,ಹಿಂಬಾಲಿಸಿದ್ದರು ಮತ್ತು ಬೆದರಿಕೆಯನ್ನೊಡ್ಡಿದ್ದರು ಎನ್ನುವುದಕ್ಕೆ ಸಾಕಷ್ಟು ಸಾಕ್ಷಧಾರಗಳಿವೆ ಎಂದು ತಿಳಿಸಿದ್ದರು. ಮಾರ್ಚ್,2017ರಲ್ಲಿ ಪ್ರಕರಣದಲ್ಲಿ ಪೂರಕ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News