ವಿದೇಶಿ ಪ್ರವಾಸಕ್ಕೆ ಭಾರತೀಯರು ಮಾಡುತ್ತಿರುವ ವೆಚ್ಚ ಎಷ್ಟು ಗೊತ್ತೇ ?

Update: 2018-09-15 03:25 GMT

ಮುಂಬೈ, ಸೆ. 15: ಭಾರತೀಯರು ವಿದೇಶಿ ಪ್ರವಾಸಕ್ಕಾಗಿ ಮಾಡುತ್ತಿರುವ ವೆಚ್ಚ 2013ರಿಂದ 457 ಪಟ್ಟು ಹೆಚ್ಚಳವಾಗಿದೆ. 2013ರ ಜುಲೈನಲ್ಲಿ ವಿದೇಶಿ ಪ್ರವಾಸಕ್ಕಾಗಿ ಭಾರತೀಯರು ಮಾಡುತ್ತಿದ್ದ ವೆಚ್ಚ 10 ಲಕ್ಷ ಡಾಲರ್‌ಗಿಂತ ಕಡಿಮೆ ಇದ್ದರೆ, ಇದೀಗ ಈ ಪ್ರಮಾಣ 450 ದಶಲಕ್ಷ ಡಾಲರ್‌ಗೆ ಹೆಚ್ಚಿದೆ. ಅಂತೆಯೇ ವಿದೇಶಿ ಅಧ್ಯಯನಕ್ಕೆ ಮಾಡುತ್ತಿರುವ ವೆಚ್ಚ 22 ಪಟ್ಟು ಹೆಚ್ಚಾಗಿದ್ದು 343 ದಶಲಕ್ಷ ಡಾಲರ್‌ಗೆ ಏರಿದೆ.

2014-15ನೇ ಹಣಕಾಸು ವರ್ಷದಲ್ಲಿ ವಿದೇಶಿ ಪ್ರವಾಸಕ್ಕೆ ಮಾಡುತ್ತಿರುವ ವೆಚ್ಚ 253 ಪಟ್ಟು ಹೆಚ್ಚಿ 16 ದಶಲಕ್ಷ ರೂಪಾಯಿಯಿಂದ 400 ಕೋಟಿ ಡಾಲರ್‌ಗೆ ಹೆಚ್ಚಿದೆ. 2018ನೇ ಹಣಕಾಸು ವರ್ಷದಲ್ಲಿ ವಿದೇಶಿ ಅಧ್ಯಯನಕ್ಕೆ ಭಾರತೀಯರು 200 ಕೋಟಿ ಡಾಲರ್ ವೆಚ್ಚ ಮಾಡಿದ್ದು, 2014ರಲ್ಲಿ ಮಾಡಿದ ವೆಚ್ಚದ 17 ಪಟ್ಟು ಅಧಿಕ.

ಈ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ಪಾವತಿ ಬಗ್ಗೆ ವರದಿ ಮಾಡುವ ವ್ಯವಸ್ಥೆಯ ಬದಲು ಕ್ರೆಡಿಟ್‌ಕಾರ್ಡ್ ವೆಚ್ಚ ವ್ಯವಸ್ಥೆಗೆ ಬದಲಾಗಿರುವುದು. ಅಂತೆಯೇ ವಿದೇಶಕ್ಕೆ ಪ್ರವಾಸ ಕೈಗೊಳ್ಳುವವರ ಸಂಖ್ಯೆ 2017ರಲ್ಲಿ 23 ದಶಲಕ್ಷಕ್ಕೆ ಹೆಚ್ಚಿದೆ. ತೈಲ ಮತ್ತು ಎಲೆಕ್ಟ್ರಾನಿಕ್ಸ್ ಆಮದಿನ ಜತೆಗೆ ವ್ಯಕ್ತಿಗಳು ಮಡುವ ನೇರ ವೆಚ್ಚ ಕೂಡಾ ದೇಶದ ಬ್ಯಾಲೆನ್ಸ್ ಆಫ್ ಪೇಮೆಂಟ್ ಮೇಲೆ ಪರಿಣಾಮ ಬೀರುತ್ತದೆ.

ಎಲ್‌ಆರ್‌ಎಸ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಭಾರತೀಯ ನಾಗರಿಕರು ವಾರ್ಷಿಕ 2.5 ಲಕ್ಷ ಡಾಲರ್ ವರೆಗೂ ವಿದೇಶಗಳಲ್ಲಿ ವೆಚ್ಚ ಮಾಡಲು ಅವಕಾಶವಿದೆ. 2017-18ರಲ್ಲಿ ಭಾರತೀಯರ ವಿದೇಶಿ ವೆಚ್ಚ ಗರಿಷ್ಠ ಎಂದರೆ 11.3 ಶತಕೋಟಿ ಡಾಲರ್‌ಗೆ ತಲುಪಿದೆ. ಈ ಹಣಕಾಸು ವರ್ಷದಲ್ಲಿ ಇದುವರೆಗೆ 420 ಕೋಟಿ ಡಾಲರ್ ವೆಚ್ಚ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News