ಪ್ರಭುತ್ವದ ಕ್ರೌರ್ಯ ಮತ್ತು ಅದರ ದುರಂತವನ್ನು ಹೇಳುವ ‘ಘೌಲ್’

Update: 2018-09-16 13:26 GMT

ಇತ್ತೀಚಿನ ದಿನಗಳಲ್ಲಿ ನೆಟ್‌ಫ್ಲಿಕ್ಸ್‌ನ ಹಿಂದಿ ಚಿತ್ರಗಳು ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿವೆ. ಗಂಭೀರ ಪ್ರೇಕ್ಷಕರಿಗಾಗಿ ಗುಣಮಟ್ಟದ ಚಿತ್ರಗಳನ್ನು ನೀಡುವ ಮೂಲಕ ನೆಟ್‌ಫ್ಲಿಕ್ಸ್ ವಿಭಿನ್ನ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುತ್ತಿದೆ. ‘ಸೇಕ್ರೆಡ್ ಗೇಮ್ಸ್’ ಅಂತಹ ವಿಭಿನ್ನ ಚಿತ್ರ ಸರಣಿಯಲ್ಲಿ ಒಂದು. ಸೈಫ್ ಅಲಿಖಾನ್ ಮತ್ತು ನವಾಝುದ್ದೀನ್ ಸಿದ್ದೀಕಿ ನಡುವಿನ ಪೊಲೀಸ್ ಮತ್ತು ಅಪರಾಧಿಯ ನಡುವಿನ ಕಣ್ಣು ಮುಚ್ಚಾಲೆ ಆಟದ ಮೂಲಕ ದೇಶದ ಪ್ರಸಕ್ತ ರಾಜಕೀಯವನ್ನು ಈ ಚಿತ್ರ ತೆರೆದಿಡುತ್ತದೆ. ಇದರ ಜೊತೆ ಜೊತೆಗೇ ಸುದ್ದಿಯಾದ ಇನ್ನೊಂದು ಹಾರರ್ ಚಿತ್ರ ‘ಘೌಲ್’.

ಇಂತಹ ಚಿತ್ರಗಳು ಹಾಲಿವುಡ್‌ನಲ್ಲಿ ನೂರಾರು ಬಂದಿವೆ. ಹಾಗೆಯೇ ಭೂತ ಪ್ರೇತಗಳ ಚಿತ್ರಗಳು ಹಿಂದಿಯಲ್ಲಿ ಕಡಿಮೆಯೇನೂ ಇಲ್ಲ. ಹೀಗಿದ್ದರೂ, ಇದು ಕೆಲವು ರಾಜಕೀಯ ಕಾರಣಗಳಿಗಾಗಿ ಬಹಳ ಮುಖ್ಯ ಚಿತ್ರವಾಗಿ ಗುರುತಿಸಿಕೊಳ್ಳುತ್ತದೆ. ಇಲ್ಲಿ ದೆವ್ವ ಅಥವಾ ಘೌಲ್ ಪಿಶಾಚಿಯನ್ನು ಸಾಂಕೇತಿಕವಾಗಿಯೂ ಬಳಸಿ ನೋಡಬಹುದು ಎನ್ನುವುದು ಚಿತ್ರಕತೆಯ ಹೆಗ್ಗಳಿಕೆ. ಈ ಚಿತ್ರದ ವಿಶೇಷತೆಯೆಂದರೆ, ಇದು ಭಾರತದ ವರ್ತಮಾನವನ್ನಲ್ಲ, ಭವಿಷ್ಯದ ಕರಾಳತೆಯನ್ನು ತೆರೆದಿಡುತ್ತದೆ. ಘಟನೆ ಭಾರತದಲ್ಲಿ ನಡೆಯುತ್ತದೆ ಎಂದು ಚಿತ್ರ ಎಲ್ಲೂ ಘೋಷಿಸಿಕೊಳ್ಳುವುದಿಲ್ಲವಾದರೂ, ಚಿತ್ರದ ಪಾತ್ರಗಳು ಮತ್ತು ಅವುಗಳ ವ್ಯಕ್ತಿತ್ವಗಳು ಭಾರತವನ್ನೇ ಪ್ರತಿನಿಧಿಸುತ್ತವೆ.

ಭಾರತದಲ್ಲಿ ಪ್ರಜಾಸತ್ತೆ ನಿಧಾನಕ್ಕೆ ಸರ್ವಾಧಿಕಾರವಾಗಿ ಬದಲಾಗುವ ಕಾಲ ಅದು. ಪುಸ್ತಕ ಓದುವವರನ್ನೆಲ್ಲ ಭಯೋತ್ಪಾದಕರು ಎಂದು ಶಂಕಿಸುವ ದಿನಗಳು. ರಾಷ್ಟ್ರೀಯವಾದವನ್ನು ಮುಂದಿಟ್ಟುಕೊಂಡು, ಸರಕಾರದ ಹಿತಾಸಕ್ತಿಗಾಗಿ, ದೇಶಕ್ಕೆ ಸಮಸ್ಯೆಯಾಗಬಹುದಾದ ಈ ಚಿಂತಕರನ್ನು ಅಥವಾ ಶಂಕಿತ ಭಯೋತ್ಪಾದಕರನ್ನು ಅಪಹರಿಸಿ ಗುಪ್ತ ಸ್ಥಳಗಳಲ್ಲಿ ವಿಚಾರಣೆ ನಡೆಸುವುದಕ್ಕಾಗಿಯೇ ವಿಶೇಷ ದಳಗಳಿವೆ. ಹೀಗೆ ಭಯೋತ್ಪಾದಕರನ್ನು ವಿಚಾರಣೆ ನಡೆಸುವುದಕ್ಕಾಗಿಯೇ ಅವರಿಗೆ ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ. ದೇಶದ ಹಿತರಕ್ಷಣೆಗಾಗಿ ಸ್ವಂತ ತಂದೆಯ ಮೇಲೆ ಅನುಮಾನ ಬಂದರೂ ಅವರ ಬಗ್ಗೆ ಈ ದಳಕ್ಕೆ ಸಂಬಧಿಸಿದವರು ಮಾಹಿತಿಯನ್ನು ನೀಡಬೇಕು. ಅಷ್ಟರಮಟ್ಟಿಗೆ ಅವರ ಮೆದುಳನ್ನು ತರಬೇತಿಯ ಹೆಸರಲ್ಲಿ ತೊಳೆಯಲಾಗುತ್ತದೆ.

ಚಿತ್ರದ ಮುಖ್ಯಪಾತ್ರಧಾರಿ ಸೇನಾಧಿಕಾರಿ ನಿದಾ ರಹೀಂ(ರಾಧಿಕಾ ಅಪ್ಟೆ). ತನ್ನ ತಂದೆ ಶಾ ನವಾಝ್ ರಹೀಂ ಗುಟ್ಟಾಗಿ ಸರಕಾರ ವಿರೋಧಿ ಪುಸ್ತಕಗಳನ್ನು ಓದುವುದು ಆಕೆಗೆ ಗೊತ್ತಾಗುತ್ತದೆ. ಅವರನ್ನು ವಿಚಾರಿಸಿ ಅವರಿಗೆ ಕ್ಲೀನ್ ಚಿಟ್ ನೀಡಲು, ಸ್ವತಃ ಮಗಳೇ ತಂದೆಯನ್ನು ಸೇನೆಗೆ ಒಪ್ಪಿಸುತ್ತಾಳೆ. ‘ತಾನು ಭಯೋತ್ಪಾದಕನಲ್ಲ’ ಎನ್ನುವುದನ್ನು ಆತ ಚೀರಿ ಮಗಳಿಗೆ ಹೇಳಿದರೂ ಅದು ಆಕೆಗೆ ಅರ್ಥವಾಗುವುದಿಲ್ಲ. ವಿಚಾರಣೆಯ ಹೆಸರಲ್ಲಿ ನಡೆಯುತ್ತಿರುವ ಪ್ರಭುತ್ವದ ಕೌರ್ಯದ ಆಳ ಆಕೆಗೆ ಗೊತ್ತೇ ಇಲ್ಲ. ಆಕೆ ನ್ಯಾಶನಲ್ ಪ್ರೊಟೆಕ್ಷನ್ ಸ್ಕ್ವಾಡ್‌ನ ಅಧಿಕಾರಿ. ಆಕೆಯನ್ನು ಒಂದು ದಿನ ಉಗ್ರವಾದಿಗಳ ವಿಚಾರಣಾ ಗುಪ್ತ ಸ್ಥಳವಾದ ಮೇಘದೂತ್ 31ಗೆ ವರ್ಗಾಯಿಸಲಾಗುತ್ತದೆ. ಆಗ ಆಕೆಗೆ ವಿಚಾರಣೆಯ ಹಿಂದಿರುವ ವಾಸ್ತವವೇನೂ ಎನ್ನುವುದು ಅರಿವಾಗುತ್ತದೆ. ಹಂತ ಹಂತವಾಗಿ ತನ್ನ ತಂದೆ ಇಂತಹದೇ ಸ್ಥಳದಲ್ಲಿ ಕೊಲೆಯಾಗಿದ್ದಾರೆ ಎನ್ನುವುದು ಆಕೆಯ ಅರಿವಿಗೆ ಬರುತ್ತದೆ.

ವಿಚಾರಣೆಯ ಹೆಸರಲ್ಲಿ ರಾಕ್ಷಸೀಯವಾದ ಹಿಂಸೆ, ಸೆರೆಯಾಳುಗಳ ದಯನೀಯ ಸ್ಥಿತಿಯನ್ನು ಚಿತ್ರ ಭಯಾನಕವಾಗಿ ಕಟ್ಟಿಕೊಡುತ್ತದೆ. ಈ ಸಂದರ್ಭದಲ್ಲಿ ನಿದಾ ರಹೀಂನ ಒಳತುಮುಲಗಳನ್ನು ರಾಧಿಕಾ ಅಪ್ಟೆ ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಒಂದೆಡೆ ಸರಕಾರಕ್ಕೆ ಬದ್ಧಳಾಗಿರುವ ನಿಷ್ಠುರ ಅಧಿಕಾರಿ. ಮಗದೊಂದೆಡೆ ಒಬ್ಬ ಮುಸ್ಲಿಮ್ ತರುಣಿಯಾಗಿ ಎದುರಿಸುವ ಅಸ್ಮಿತೆಯ ಸವಾಲು. ಜೊತೆಗೆ ತನ್ನ ತಂದೆಯ ಕುರಿತಂತೆ ಇರುವ ಪಾಪಪ್ರಜ್ಞೆ. ಕರ್ನಲ್ ಡಿಕುನ್ಹಾನಿಗೆ ನಿದಾ ರಹೀಂನ ಕರ್ತವ್ಯ ಪ್ರಜ್ಞೆಯ ಕುರಿತು ಅಗಾಧ ಭರವಸೆ. ಇದೇ ಸಂದರ್ಭದಲ್ಲಿ ಈ ಸ್ಥಳಕ್ಕೆ ಕುಖ್ಯಾತ ಉಗ್ರವಾದಿ ಅಲೀ ಸಯೀದ್‌ನನ್ನು ಕರೆತರಲಾಗುತ್ತದೆ. ಆತನ ವಿಚಾರಣೆಯ ಹೊಣೆಯನ್ನು ನಿದಾ ರಹೀಂಗೆ ವಹಿಸಲಾಗುತ್ತದೆ. ಕತೆ ಇಲ್ಲಿಂದ ತಿರುವನ್ನು ಪಡೆಯುತ್ತದೆ. ಆವರೆಗೆ ಪ್ರಭುತ್ವದ ಕ್ರೌರ್ಯಗಳ ಪರಾಕಾಷ್ಠೆಯನ್ನು ಚಿತ್ರ ಹೇಳುತ್ತಿದ್ದರೆ, ನಿಧಾನಕ್ಕೆ ದೆವ್ವದ ಕತೆಯಾಗಿ ದಿಕ್ಕು ತಪ್ಪುತ್ತದೆ.

‘ಘೌಲ್’ ಎನ್ನುವುದು ಅರಬ್ ದಂತಕತೆಗಳಲ್ಲಿ ಬರುವ ಸೈತಾನ. ಮನುಷ್ಯನ ರಕ್ತಕ್ಕಾಗಿ ಹಪ ಹಪಿಸುವ ರಾಕ್ಷಸ. ಹಿಂಸೆಯ ರಕ್ತದಲ್ಲಿ ನೆಂದಿರುವ ಮೇಘದೂತ್ 31ನಲ್ಲಿ ಅಲಿ ಮೂಲಕ ಘೌಲ್ ಪ್ರವೇಶವಾಗುತ್ತದೆ. ಅದು ನಿಧಾನಕ್ಕೆ ಜೈಲು ಸಿಬ್ಬಂದಿಯನ್ನು, ತನಿಖಾಧಿಕಾರಿಗಳನ್ನು ಮಾತ್ರವಲ್ಲ, ಕೈದಿಗಳನ್ನು ಬಲಿತೆಗೆದುಕೊಳ್ಳತೊಡಗುತ್ತದೆ. ನಿದಾ ರಹೀಂ ಈ ಘೌಲ್‌ನ ಹಿನ್ನೆಲೆಯನ್ನು ಹುಡುಕ ತೊಡಗುತ್ತಾಳೆ. ಆಗ ಗೊತ್ತಾಗುತ್ತದೆ, ಈ ಘೌಲ್‌ನ ಸೃಷ್ಟಿಗೆ ಕಾರಣವೇ ತನ್ನ ತಂದೆ ಎನ್ನುವುದು. ದೇಶಪ್ರೇಮ, ರಾಷ್ಟ್ರೀಯತೆಯ ಹೆಸರಲ್ಲಿ ನಡೆಯುತ್ತಿರುವ ವಾಸ್ತವವನ್ನು ಆಕೆಗೆ ತಿಳಿಸುವುದಕ್ಕಾಗಿಯೇ ಆತ ತನ್ನ ಪುರಾತನ ಜ್ಞಾನದ ಮೂಲಕ ರಾಕ್ಷಸನನ್ನು ಆಹ್ವಾನಿಸುತ್ತಾರೆ. ಅಲಿ ಮೂಲಕ ಅದು ಜೈಲಿನಲ್ಲಿ ಎಲ್ಲರನ್ನು ಆವಾಹಿಸುತ್ತಾ ಸಾಯಿಸುತ್ತಾ ಮುಂದುವರಿಯುತ್ತದೆ. ತನ್ನನ್ನು ತಾನು ದೇಶದ ಹೀರೋ ಎಂದು ಬಣ್ಣಿಸಿಕೊಳ್ಳುವ ಕರ್ನಲ್ ಡಿಕುನ್ಹಾನನ್ನು ಘೌಲ್ ಪ್ರವೇಶಿಸುತ್ತದೆ. ಚಿತ್ರದ ಕೊನೆಯಲ್ಲಿ ಡಿಕುನ್ಹಾ ಹೇಳುತ್ತಾನೆ ‘‘ನಾನು ದೆವ್ವ ಅಲ್ಲ. ನಾನು ದೇಶದ ನಿಜವಾದ ಯೋಧ, ಹೀರೋ...’’

ಡಿಕುನ್ಹಾನನ್ನು ಘೌಲ್ ಆವಾಹಿಸಿದೆಯೋ ಇಲ್ಲವೋ....ಆದರೆ ನಿದಾ ರಹೀಂಗೆ ಸ್ಪಷ್ಟವಿತ್ತು. ಅವನೊಬ್ಬ ರಾಕ್ಷಸ. ಅದನ್ನೇ ಹೇಳಿ, ಆತನಿಗೆ ಗುಂಡು ಹಾರಿಸುತ್ತಾಳೆ. ಚಿತ್ರದ ಕೊನೆಯಲ್ಲಿ ಮೇಘದೂತ 31ನ್ನು ರಕ್ಷಿಸಲು ಇನ್ನೊಂದು ತಂಡ ಬರುತ್ತದೆ. ಅಲ್ಲಿ ನಡೆದ ಸಕಲ ಹಿಂಸೆಯ ಹೊಣೆ ನಿದಾ ರಹೀಂ ಮೇಲೆ ಬೀಳುತ್ತದೆ. ಆಕೆಯನ್ನು ಇನ್ನೊಂದು ಗುಪ್ತ ಸ್ಥಳದಲ್ಲಿ ಇಟ್ಟು ವಿಚಾರಣೆ ನಡೆಸಲಾಗುತ್ತದೆ. ಅಲ್ಲಿ ಆಕೆಯ ಮೇಲೆ ನಡೆಯುವ ದೌರ್ಜನ್ಯ, ಮತ್ತೆ ಘೌಲ್‌ನ ಆಗಮನದ ಸೂಚನೆಯನ್ನು ನೀಡುತ್ತಾ ಚಿತ್ರ ಮುಕ್ತಾಯವಾಗುತ್ತದೆ. ಇಲ್ಲಿ ಘೌಲ್ ಎನ್ನುವುದು ದೆವ್ವ ಆಗಿರಬಹುದು ಅಥವಾ ಪ್ರಭುತ್ವದ ಹಿಂಸೆಯ ಪರಾಕಷ್ಠೆ ತಾನಾಗಿಯೇ ಸೃಷ್ಟಿಸುವ ಪ್ರತಿ ಹಿಂಸೆಯೂ ಆಗಬಹುದು. ಘೌಲ್ ಮೂಲಕ ಭಾರತದ ಭವಿಷ್ಯದ ಆತಂಕಗಳನ್ನು ಸೂಚ್ಯವಾಗಿ ಹೇಳುವ ಪ್ರಯತ್ನ ನಡೆಸಿದ್ದಾರೆ ನಿರ್ದೇಶಕ ಪ್ಯಾಟ್ರಿಕ್ ಗ್ರಹಾಂ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News