ಈ ನಗರದಲ್ಲಿ ಆರಂಭವಾಗಲಿದೆ ದೇಶದ ಮೊದಲ ನಾಯಿ ಪಾರ್ಕ್ !

Update: 2018-09-16 14:43 GMT

ಹೈದರಾಬಾದ್, ಸೆ. 16: ವಾಕಿಂಗ್ ಟ್ರ್ಯಾಕ್, ಆಫ್‌ಲೀಸ್ ಪ್ರದೇಶ ಹಾಗೂ ಚಿಕಿತ್ಸಾಲಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ದೇಶದ ಮೊದಲ ನಾಯಿ ಪಾರ್ಕ್ ಇಲ್ಲಿನ ಕೊಂಡಾಪುರದಲ್ಲಿ ಶೀಘ್ರದಲ್ಲಿ ಆರಂಭವಾಗಲಿದೆ. ಗ್ರೇಟರ್ ಹೈದರಾಬಾದ್ ನಗರಾಡಳಿತ (ಜಿಎಚ್‌ಎಂಸಿ) 11 ಕೋ. ರೂ. ವೆಚ್ಚದಲ್ಲಿ ಈ ಪಾರ್ಕ್ ಅನ್ನು ಅಭಿವೃದ್ಧಿಗೊಳಿಸಿದೆ.

ಈ ಪಾರ್ಕ್ 1.3 ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಈ ಹಿಂದೆ ಈ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿತ್ತು. ನಾಯಿಗಳಿಗೆ ತರಬೇತಿ ಹಾಗೂ ವ್ಯಾಯಾಮ ಉಪಕರಣಗಳು, ನೀರೆರೆಚುವ ಪೂಲ್, ಎರಡು ಹುಲ್ಲು ಹಾಸು, ಆಂಫಿಥಿಯೇಟರ್, ಲೂ ಕೆಫೆ, ದೊಡ್ಡ ಹಾಗೂ ಸಣ್ಣ ನಾಯಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮೊದಲಾದ ಸೌಲಭ್ಯವನ್ನು ಈ ಪಾರ್ಕ್ ಹೊಂದಿದೆ ಎಂದು ಜಿಎಚ್‌ಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ದೇಶದ ಮೊದಲ ಪ್ರತ್ಯೇಕ ಹಾಗೂ ಪ್ರಮಾಣಿಕೃತ ನಾಯಿ ಪಾರ್ಕ್. ಇಲ್ಲಿನ ಸ್ವಚ್ಛತಾ ಶಿಷ್ಟಾಚಾರ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಇರಲಿದೆ. ಪ್ರಾಣಿಗಳಿಗೆ ಉಚಿತ ಲಸಿಕೆ ನೀಡಲಾಗುತ್ತದೆ ಎಂದು ಜಿಎಚ್‌ಎಂಸಿ ವಲಯ ಆಯುಕ್ತ ಡಿ. ಹರಿಶ್ಚಂದ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾನು ವಿದೇಶಗಳಲ್ಲಿ ನಾಯಿ ಪಾರ್ಕ್ ನೋಡಿದ್ದೆ. ಅಂತಹ ಅಂತಾರಾಷ್ಟ್ರೀಯ ಮಟ್ಟದ ನಾಯಿ ಪಾರ್ಕ್ ಅನ್ನು ಯಾಕೆ ಆರಂಭಿಸಬಾರದು ಎಂದು ನಾನು ಚಿಂತಿಸಿದ್ದೆ ಎಂದು ಅವರು ಹೇಳಿದ್ದಾರೆ. ನಾವು ವಿನ್ಯಾಸಗಾರರು, ಪ್ರಾಣಿ ಸಮಾಲೋಚಕರೊಂದಿಗೆ ಸಭೆ ನಡೆಸಿದೆವು. ಸಭೆಯ ನಿರ್ಣಯದಂತೆ ಕಳೆದ ಒಂದು ವರ್ಷದಿಂದ ಇಲ್ಲಿ ಪಾರ್ಕ್ ಅಭಿವೃದ್ಧಿಗೊಳಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News