ಭಾರತವು ಚೀನಾ ಗಡಿಯಲ್ಲಿ ತನ್ನ ಭದ್ರತೆಯನ್ನು ತಗ್ಗಿಸುತ್ತಿಲ್ಲ: ನಿರ್ಮಲಾ ಸೀತಾರಾಮನ್

Update: 2018-09-16 16:07 GMT

ಹೊಸದಿಲ್ಲಿ,ಸೆ.16: ಭಾರತವು ಚೀನಾದೊಂದಿಗಿನ ವಾಸ್ತವಿಕ ಗಡಿ ರೇಖೆ(ಎಲ್‌ಎಸಿ)

 ಯಲ್ಲಿ ತನ್ನ ಭದ್ರತೆಯನ್ನು ಕಡಿಮೆಗೊಳಿಸುವುದಿಲ್ಲ ಮತ್ತು ವುಹಾನ್ ಶೃಂಗಸಭೆಯ ಮಾತುಕತೆಗಳಂತೆ ಗಡಿಯಲ್ಲಿ ಶಾಂತಿ ನೆಲೆಸಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ಇಲ್ಲಿ ತಿಳಿಸಿದರು.

   ಕಳೆದ ಎಪ್ರಿಲ್‌ನಲ್ಲಿ ವುಹಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವೆ ನಡೆದಿದ್ದ ಅನೌಪಚಾರಿಕ ಶೃಂಗಸಭೆಯಲ್ಲಿ ತೆಗೆದುಕೊಳ್ಳಲಾಗಿದ್ದ ನಿರ್ಧಾರಗಳಂತೆ ಗಡಿಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಬೇಕು ಎನ್ನುವುದನ್ನು ಉಭಯ ರಾಷ್ಟ್ರಗಳು ಮಾನ್ಯ ಮಾಡಿವೆ ಎಂದು ತಿಂಗಳ ಹಿಂದಷ್ಟೇ ಚೀನಾದ ರಕ್ಷಣಾ ಸಚಿವ ವಿ ಫೆಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದ ಸೀತಾರಾಮನ್ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವುಹಾನ್ ಮಾತುಕತೆಯ ಬಳಿಕವೂ ಭಾರತವು ಗಡಿಯಲ್ಲಿ ತನ್ನ ಭದ್ರತೆಯನ್ನು ಕಾಯ್ದುಕೊಂಡಿದೆ ಮತ್ತು ಅದನ್ನು ತಗ್ಗಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಉಭಯ ರಾಷ್ಟ್ರಗಳ ಸಂಬಂಧಗಳಲ್ಲಿ ಹೊಸ ಅಧ್ಯಾಯವೊಂದನ್ನು ತೆರೆಯಲು ವುಹಾನ್ ಶೃಂಗಸಭೆಯಲ್ಲಿ ನಿರ್ಧರಿಸಿದ್ದ ಮೋದಿ ಮತ್ತು ಜಿನ್‌ಪಿಂಗ್‌ ಅವರು, ಭಾರತ-ಚೀನಾ ಗಡಿಯಲ್ಲಿ ಪರಸ್ಪರ ಸಮನ್ವಯವನ್ನು ಹೆಚ್ಚಿಸುವಂತೆ ತಮ್ಮ ಸೇನೆಗಳಿಗೆ ನಿರ್ದೇಶ ನೀಡಿದ್ದರು.

ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳುವಂತೆ ತಮ್ಮ ಸೇನೆಗಳಿಗೆ ವ್ಯೂಹಾತ್ಮಕ ಮಾರ್ಗಸೂಚಿಗಳನ್ನು ಹೊರಡಿಸುವ ಮೋದಿ ಮತ್ತು ಜಿನ್‌ಪಿಂಗ್ ಅವರ ನಿರ್ಧಾರವು ನಿರೀಕ್ಷಿತ ಫಲಗಳನ್ನು ನೀಡಿದೆಯೇ ಎಂಬ ಪ್ರಶ್ನೆಗೆ ಸೀತಾರಾಮನ್ ಧನಾತ್ಮಕವಾಗಿ ಉತ್ತರಿಸಿದರು. ಇದೇ ವೇಳೆ,ದೇಶದ ರಕ್ಷಣಾ ಸಚಿವೆಯಾಗಿ ಗಡಿಗಳನ್ನು ಕಟ್ಟೆಚ್ಚರದಲ್ಲಿರಿಸಬೇಕೆಂಬ ತನ್ನ ಕರ್ತವ್ಯದ ಬಗ್ಗೆ ತನಗೆ ಸಂಪೂರ್ಣ ಅರಿವಿದೆ ಎಂದು ಅವರು ಹೇಳಿದರು.

ಭಾರತವು ತನ್ನ ಪಶ್ಚಿಮ ಗಡಿಯಿಂದ ಉತ್ತರ ಗಡಿಯತ್ತ ಗಮನವನ್ನು ಕೇಂದ್ರೀಕರಿಸುವ ಕಾಲ ಬಂದಿದೆ ಎಂದು ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರ ಹಿಂದಿನ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು,ಗಡಿಯೆಂದರೆ ಗಡಿ,ತಾನು ಎರಡೂ ಗಡಿಗಳ ಎಚ್ಚರಿಕೆ ವಹಿಸಬೇಕಿದೆ,ಅಲ್ಲದೆ ಸಾಗರ ಗಡಿಯ ಬಗ್ಗೆಯೂ ಕಾಳಜಿ ವಹಿಸಬೇಕಿದೆ ಎಂದು ಹೇಳಿದರು.

ಎಲ್‌ಎಸಿ ಕುರಿತು ಮಾತನಾಡಿದ ಸೀತಾರಾಮನ್,ಅದನ್ನು ಸಂಪೂರ್ಣವಾಗಿ ಗುರುತಿಸಲಾಗಿಲ್ಲ,ಹೀಗಾಗಿ ಉಭಯ ಕಡೆಗಳಲ್ಲಿ ವಿಭಿನ್ನ ದೃಷ್ಟಿಕೋನಗಳಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News