ಮಲ್ಯಗೆ ಸಾಲ ನೀಡಿದ್ದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೋಷಾರೋಪಣ ಸಾಧ್ಯತೆ

Update: 2018-09-16 16:09 GMT

 ಹೊಸದಿಲ್ಲಿ,ಸೆ.16: ಉದ್ಯಮಿ ವಿಜಯ ಮಲ್ಯರ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ನೀಡಿದ್ದ ಸಾಲಗಳನ್ನು ನಿರ್ವಹಿಸಿದ್ದ ಹಲವಾರು ಹಿರಿಯ ಬ್ಯಾಂಕ್ ಅಧಿಕಾರಿಗಳನ್ನು ಈ ತಿಂಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಬಹುದಾದ ಸಿಬಿಐ ದೋಷಾರೋಪಣ ಪಟ್ಟಿಯಲ್ಲಿ ಆರೋಪಿಗಳನ್ನಾಗಿ ಹೆಸರಿಸಬಹುದು ಎಂದು ಮೂಲಗಳು ತಿಳಿಸಿವೆ.

ಎಸ್‌ಬಿಐ ನೇತೃತ್ವದ 17 ಬ್ಯಾಂಕುಗಳ ಕೂಟವು ಕಿಂಗ್‌ಫಿಷರ್‌ಗೆ ನೀಡಿದ್ದ 6,000 ಕೋ.ರೂ.ಗೂ ಅಧಿಕ ಸಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇದು ಮೊದಲ ದೋಷಾರೊಪಣ ಪಟ್ಟಿಯಾಗಲಿದೆ. ಎಸ್‌ಬಿಐ ಒಂದೇ 1,600 ಕೋ.ರೂ.ಸಾಲ ನೀಡಿತ್ತು.

ಐಡಿಬಿಐ ಬ್ಯಾಂಕಿನ 900 ಕೋ.ರೂ.ಸಾಲಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಸಿಬಿಐ ಕಳೆದ ವರ್ಷವೇ ಮಲ್ಯವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದೆ. ಈ ಪ್ರಕರಣದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.

ದೋಷಾರೋಪಣ ಪಟ್ಟಿಯಲ್ಲಿ ಆರೋಪಿಗಳಾಗಿ ದಾಖಲಾಗಲಿರುವ ಅಧಿಕಾರಿಗಳ ಹೆಸರುಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದ ಮೂಲಗಳು,ಬ್ಯಾಂಕುಗಳ ಕೂಟವು ನೀಡಿದ್ದ ಸಾಲಗಳ ತನಿಖೆಯ ಮೊದಲ ಹಂತವು ಪೂರ್ಣಗೊಂಡಿದ್ದು, ತನಿಖೆಯನ್ನು ಮುಕ್ತವಾಗಿರಿಸಿ ಇನ್ನೊಂದು ತಿಂಗಳಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದವು. ಮಲ್ಯಗೆ ನೀಡಿದ್ದ ಸಾಲವನ್ನು ನಿರ್ವಹಿಸಿದ್ದ ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕುಗಳ ಹಾಲಿ ಮತ್ತು ನಿವೃತ್ತ ಅಧಿಕಾರಿಗಳನ್ನು ದೋಷಾರೋಪಣ ಪಟ್ಟಿಯಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗುವುದು. ಅವರು ಅಧಿಕಾರ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಸಾಕ್ಷಾಧಾರಗಳನ್ನು ಸಿಬಿಐ ಸಂಗ್ರಹಿಸಿದೆ ಎಂದು ಮೂಲಗಳು ಹೇಳಿದವು.

ಬ್ಯಾಂಕುಗಳ ನಿರ್ಧಾರದ ಮೇಲೆ ಪ್ರಭಾವ ಬೀರಿದ್ದಿರಬಹುದಾದ ವಿತ್ತ ಸಚಿವಾಲಯದ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಿಬಿಐ ಪರಿಶೀಲಿಸುತ್ತಿದೆ ಎಂದು ಈ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News