ಈ ಗಂಡಂದಿರು ಪ್ರತಿಭಟನೆ ನಡೆಸಿದ್ದು ಏಕೆ ಗೊತ್ತೇ?

Update: 2018-09-17 04:05 GMT

ಹೈದರಾಬಾದ್, ಸೆ.17: ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರ ಮಂಗಲಸೂತ್ರವನ್ನು ಒತ್ತಾಯಪೂರ್ವಕವಾಗಿ ತೆಗೆಸಲಾಗಿದೆ ಎಂದು ಆಪಾದಿಸಿ ತೆಲಂಗಾಣದ ಮೇಡಕ್ ಜಿಲ್ಲೆಯ ನರಸಾಪುರ ಪರೀಕ್ಷಾ ಕೇಂದ್ರದ ಮುಂದೆ ಈ ಮಹಿಳೆಯರ ಗಂಡಂದಿರು ಮಿಂಚಿನ ಪ್ರತಿಭಟನೆ ನಡೆಸಿದರು.

ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ (ಟಿಎಸ್‌ಪಿಎಸ್‌ಸಿ) ಗ್ರಾಮ ಕಂದಾಯ ಅಧಿಕಾರಿ (ವಿಆರ್‌ಓ) ಹುದ್ದೆಗಳಿಗೆ ರಾಜ್ಯಾದ್ಯಂತ 2,000 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿತ್ತು. 700 ಹುದ್ದೆಗಳಿಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದಾರೆ. ಬಹುತೇಕ ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆದಿದ್ದರೆ, ನರಸಾಪುರದ ಲಿಟ್ಲ್ ಫ್ಲವರ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ, ವಿವಾಹಿತ ಮಹಿಳೆಯರು ಮಂಗಲಸೂತ್ರ ತೆಗೆಯಬೇಕು ಎಂದು ಕಡ್ಡಾಯಪಡಿಸಲಾಗಿತ್ತು.

ಮಂಗಲಸೂತ್ರದಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಅಳವಡಿಸಿಕೊಂಡಿರಬಹುದು ಎಂಬ ಕಾರಣಕ್ಕೆ ಈ ಸೂಚನೆ ನೀಡಿರುವ ಸಾಧ್ಯತೆ ಇದೆ. ಅಲ್ಲದೆ ಟಿಎಸ್‌ಪಿಎಸ್‌ಸಿ ನೇಮಕಾತಿ ಪರೀಕ್ಷೆಯ ಷರತ್ತುಗಳ ಪೈಕಿ, ಅಭ್ಯರ್ಥಿ ಯಾವುದೇ ಚಿನ್ನದ ಆಭರಣಗಳನ್ನು ಧರಿಸಿರಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಮಂಗಲಸೂತ್ರ ತೆಗೆಯುವುದು ಹಿಂದೂ ಭಾವನೆಗಳಿಗೆ ವಿರುದ್ಧವಾದದ್ದು ಎಂದು ಅಧಿಕಾರಿಗಳ ಮನವೊಲಿಸಲು ಮಹಿಳಾ ಅಭ್ಯರ್ಥಿಗಳು ಪ್ರಯತ್ನಿಸಿದರು. ಆದರೆ ಅಧಿಕಾರಿಗಳು ಅವಕಾಶ ನೀಡದ ಕಾರಣ, ಹಲವು ಮಂದಿ ಪರೀಕ್ಷಾ ಕೇಂದ್ರ ಪ್ರವೇಶಿಸಲು ತಮ್ಮ ಮಂಗಲಸೂತ್ರಗಳನ್ನು ತೆಗೆದು ಗಂಡಂದಿರಲ್ಲಿ ಕೊಟ್ಟರು ಎನ್ನಲಾಗಿದೆ. ಇದು ಪರೀಕ್ಷಾ ಕೇಂದ್ರದ ಹೊರಗೆ ಗದ್ದಲ ಹಾಗೂ ಪ್ರತಿಭಟನೆಗೆ ಕಾರಣವಾಯಿತು.

ಈ ಹಂತದಲ್ಲಿ ಹಲವು ಮಹಿಳೆಯರು ಮಂಗಲಸೂತ್ರ ತೆಗೆಯಲು ನಿರಾಕರಿಸಿ, ಪೊಲೀಸರಿಗೆ ದೂರು ನೀಡಿದರು. ಪೊಲೀಸ್ ಮಧ್ಯಪ್ರವೇಶದ ಬಳಿಕ ಉಳಿದ ಮಹಿಳೆಯರು ಮಂಗಲಸೂತ್ರ ಧರಿಸಿಯೇ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು. ಮಂಗಲಸೂತ್ರ ತೆಗೆಸುವಂತೆ ಎಲ್ಲೂ ಸೂಚನೆ ನೀಡಿರಲಿಲ್ಲ ಎಂದು ಟಿಎಸ್‌ಪಿಎಸ್‌ಸಿ ಅಧ್ಯಕ್ಷ ಘಂಟ ಚಕ್ರಪಾಣಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News