ಬೈನಾಕುಲರ್ ಗಳನ್ನು ಬಳಸಿ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಿರುವ ಸಿಕ್ಖರು

Update: 2018-09-17 11:01 GMT

ಪಂಜಾಬಿನ ಗುರುದಾಸಪುರ ಜಿಲ್ಲೆಯ ಭಾರತ-ಪಾಕ್ ಅಂತರ್‌ರಾಷ್ಟ್ರೀಯ ಗಡಿಯ ಬಳಿಯಿರುವ ‘ದರ್ಶನ ಸ್ಥಳ’ದಲ್ಲಿ ನೂರಾರು ಭಾರತೀಯ ಸಿಖ್ಖರು ಸಾಲುಗಟ್ಟಿ ನಿಲ್ಲುತ್ತಾರೆ. ಗಡಿಯಾಚೆಯ ಪಾಕ್ ಮುಂಚೂಣಿ ಪ್ರದೇಶದಲ್ಲಿರುವ ತಮ್ಮ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲೊಂದಾಗಿರುವ ಗುರುದ್ವಾರಾ ಕರ್ತಾರಪುರ ಸಾಹಿಬ್‌ನ ಒಂದು ನೋಟಕ್ಕಾಗಿ ಅವರು ಹಂಬಲಿಸುತ್ತಾರೆ. ಇದಕ್ಕಾಗಿ ಇಲ್ಲಿ ಕಬ್ಬಿಣದ ಪೆಟ್ಟಿಗೆಯೊಂದರಲ್ಲಿ ಅಳವಡಿಸಲಾಗಿರುವ ಬೈನಾಕುಲರ್ ಅಥವಾ ದೂರದರ್ಶಕ ಅವರ ಏಕೈಕ ಆಶಾಕಿರಣವಾಗಿದೆ.

 ಪಂಜಾಬ್ ಸಚಿವ ನವಜೋತಸಿಂಗ್ ಸಿಧು ಅವರು ಕಳೆದ ತಿಂಗಳು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ.ಕಮರ್ ಜಾವೇದ್ ಬಾಜ್ವಾ ಅವರನ್ನು ಭೇಟಿಯಾದ ಸಂದರ್ಭ ಮುಂದಿನ ವರ್ಷ ಗುರು ನಾನಕ್‌ರ 550ನೇ ಜನ್ಮ ದಿನಾಚರಣೆಗಾಗಿ ದೇರಾ ಬಾಬಾ ನಾನಕ್ ಮೂಲಕ ಗುರುದ್ವಾರಾಕ್ಕೆ ಮಾರ್ಗವನ್ನು ಮುಕ್ತಗೊಳಿಸುವುದಾಗಿ ಅವರು ಭರವಸೆ ನೀಡಿದ್ದರು. ಸಿಧು ಈ ವಿಷಯವನ್ನು ಹೇಳಿಕೊಂಡ ಬಳಿಕ ದರ್ಶನ ಸ್ಥಳಕ್ಕೆ ಭೇಟಿ ನೀಡುವವರ ಸಂಖ್ಯೆ ದಿನೇದಿನೇ ಹೆಚ್ಚತೊಡಗಿದೆ.

ಸಿಖ್ ಶ್ರದ್ಧಾಳುಗಳಿಗಾಗಿ ಬಿಎಎಫ್ ದರ್ಶನ ಸ್ಥಳವನ್ನು ನಿರ್ಮಿಸಿದ್ದು,ಇಲ್ಲಿಂದ ಬೈನಾಕುಲರ್ ಮೂಲಕ ಕರ್ತಾರಪುರ ಸಾಹಿಬ್‌ನ ಬಿಳಿಯ ಕಟ್ಟಡ ಮತ್ತು ಗುಮ್ಮಟವನ್ನು ನೋಡಿ ಧನ್ಯರಾಗುತ್ತಿದ್ದಾರೆ. ಅತ್ಯಂತ ಬಿಗು ಕಾವಲು ಹೊಂದಿರುವ ಈ ಗಡಿಯ ಇನ್ನೊಂದು ಕಡೆಗೆ ಬೆಳೆದಿರುವ ಎತ್ತರದ ಹುಲ್ಲಿನಿಂದಾಗಿ ಗುರುದ್ವಾರಾದ ಸಂಪೂರ್ಣ ನೋಟಕ್ಕೆ ಅಡ್ಡಿಯಾಗುತ್ತಿದೆಯಾದರೂ ಭಕ್ತರು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬೈನಾಕುಲರ್ ಮೂಲಕ ಗುರುದ್ವಾರಾವನ್ನು ದರ್ಶಿಸುವ ಅವರು ಕೈಮುಗಿದು,ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

ಸಿಖ್ ಇತಿಹಾಸದಂತೆ ಗುರು ನಾನಕ್‌ರು ತನ್ನ ನಾಲ್ಕು ಪ್ರಸಿದ್ಧ ಪ್ರವಾಸಗಳನ್ನು ಪೂರ್ಣಗೊಳಿಸಿದ ಬಳಿಕ 1522ರಲ್ಲಿ ಕರ್ತಾರಪುರ ಸಾಹಿಬ್‌ನಲ್ಲಿ ನೆಲೆಯೂರಿದ್ದರು ಮತ್ತು ತನ್ನ ಬದುಕಿನ ಅಂತಿಮ 17ವರ್ಷಗಳಲ್ಲಿ ಹೊಲಗಳನ್ನು ಊಳುತ್ತ ಸರಳ ಜೀವನವನ್ನು ನಡೆಸಿದ್ದರು. ಅವರ ನಿಧನದ ಬಳಿಕ ಈ ಸ್ಥಳದಲ್ಲಿ ಗುರುದ್ವಾರಾವನ್ನು ನಿರ್ಮಿಸಲಾಗಿತ್ತು.

ಸಿಧು ಹೇಳಿಕೆಯನ್ನು ಭಾರತ ಅಥವಾ ಪಾಕಿಸ್ತಾನ ಈವರೆಗೆ ದೃಢಪಡಿಸಿಲ್ಲವಾದರೂ ಪಾಕ್‌ನಲ್ಲಿ ಭಾರತೀಯ ರಾಯಭಾರಿಯಾಗಿರುವ ಅಜಯ ಬಿಸರಿಯಾ ಅವರು ಇತ್ತೀಚಿಗೆ ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಿದ್ದನ್ನು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಪಾಕಿಸ್ತಾನವು ಈ ಹಿಂದೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಭಾರತೀಯ ಸಿಕ್ಖರು ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಲು ಅನುಮತಿಯನ್ನು ನಿರಾಕರಿಸಿತ್ತು.

ಈ ಎಲ್ಲ ವರ್ಷಗಳಲ್ಲಿ ಕರ್ತಾರಪುರ ಸಾಹಿಬ್ ಗುರುದ್ವಾರಾಕ್ಕೆ ಭಾರತೀಯ ಸಿಕ್ಖರ ಭೇಟಿಗೆ ಅವಕಾಶಕ್ಕಾಗಿ ಹಲವಾರು ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ,ಆದರೆ ಯಾವುದೇ ಪ್ರಯೋಜನವಾಗಿಲ್ಲ. 1999ರಲ್ಲಿ ಆಗಿನ ಪಾಕ್ ಅಧ್ಯಕ್ಷ ಪರ್ವೇಝ್ ಮುಶರಫ್ ಅವರು ದೇರಾ ಬಾಬಾ ನಾನಕ್ ಮೂಲಕ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆ ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಸಿಕ್ಖರಿಗೆ ಅವಕಾಶವನ್ನು ಒದಗಿಸಿದ್ದರು.

  2010ರಲ್ಲಿ ಪಂಜಾಬ್ ವಿಧಾನಸಭೆಯು ಕರ್ತಾರಪುರ ಸಾಹಿಬ್ ವಿಷಯವನ್ನು ಪಾಕ್ ಸರಕಾರದೊಂದಿಗ ಕೈಗೆತ್ತಿಕೊಳ್ಳುವಂತೆ ಭಾರತ ಸರಕಾರವನ್ನು ಕೋರಿಕೊಂಡು ನಿರ್ಣಯವೊಂದನ್ನು ಅಂಗೀಕರಿಸಿತ್ತು. ಅದೇ ವರ್ಷ ಅಮೆರಿಕದ ಸಂಸ್ಥೆಯೊಂದು ‘ಕರ್ತಾರಪುರ ಮಾರ್ಗ’ ನಿರ್ಮಾಣದ ಬಗ್ಗೆ ತನ್ನ ವರದಿಯನ್ನು ವಾಷಿಂಗ್ಟನ್‌ನಲ್ಲಿ ಭಾರತ ಮತ್ತು ಪಾಕ್ ರಾಯಭಾರಿಗಳಿಗೆ ಸಲ್ಲಿಸಿತ್ತು. ಈ ಮಾರ್ಗ ನಿರ್ಮಾಣಕ್ಕೆ ಭಾರತವು 106 ಕೋ.ರೂ. ಮತ್ತು ಪಾಕಿಸ್ತಾನವು 16 ಕೋ.ರೂ.ಗನ್ನು ವ್ಯಯಿಸಬೇಕಾಗುತ್ತದೆ ಎಂದು ಅದು ಅಂದಾಜಿಸಿತ್ತು. ತನ್ಮಧ್ಯೆ ಉಭಯ ಸರಕಾರಗಳು ಒಪ್ಪಿದರೆ ಕರ್ತಾರಪುರಕ್ಕೆ ರಸ್ತೆಯನ್ನು ತನ್ನ ಸ್ವಂತ ಖರ್ಚಿನಿಂದಲೇ ನಿರ್ಮಿಸಲು ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿಯು ಮುಂದೆ ಬಂದಿದೆ. ವಿವಿಧ ಅಂತರರಾಷ್ಟ್ರೀಯ ಸಿಖ್ ನಿಯೋಗಗಳು ಈ ವಿಷಯದಲ್ಲಿ ಪಾಕ್ ಅಧಿಕಾರಿಗಳ ಮನವೊಲಿಸಲು ಪ್ರಯತ್ನ್ನಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News