ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ ಕುರಿತ ಹೇಳಿಕೆಗೆ ನಟ ಮೋಹನ್‌ಲಾಲ್ ಕ್ಷಮೆ ಯಾಚನೆ

Update: 2018-09-17 14:56 GMT

ತಿರುವನಂತಪುರಂ, ಸೆ.17: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದ ಕುರಿತು ತಾನು ನೀಡಿದ ಪ್ರತಿಕ್ರಿಯೆಯ ಬಗ್ಗೆ ನಟ ಮೋಹನ್‌ಲಾಲ್ ಕ್ಷಮೆ ಯಾಚಿಸಿದ್ದಾರೆ. ಶನಿವಾರ ಕೊಚ್ಚಿಯಲ್ಲಿ , ವಿಶ್ವಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಲಾದ ಕೇರಳ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನು ರವಾನಿಸುವ ಕಾರ್ಯಕ್ರಮದಲ್ಲಿ ನಟ ಮೋಹನ್‌ಲಾಲ್ ಪಾಲ್ಗೊಂಡಿದ್ದರು. ಈ ಸಂದರ್ಭ ಪತ್ರಕರ್ತರೊಬ್ಬರು, ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಷಪ್‌ರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕ್ರೈಸ್ತ ಸನ್ಯಾಸಿನಿಯರ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದ್ದರು.

ಈ ಪ್ರಶ್ನೆಯಿಂದ ಸಿಡಿಮಿಡಿಗೊಂಡಿದ್ದ ಮೋಹನ್‌ಲಾಲ್, ಇಂತಹ ಒಳ್ಳೆಯ ಕಾರ್ಯ ಮಾಡುತ್ತಿರುವಾಗ ಈ ರೀತಿಯ ಪ್ರಶ್ನೆ ಕೇಳಲು ನಿಮಗೆ ನಾಚಿಕೆಯಾಗೋಲ್ಲವೇ ಎಂದು ಪತ್ರಕರ್ತನನ್ನು ಪ್ರಶ್ನಿಸಿದ್ದರು. ಅಲ್ಲದೆ, ಕ್ರೈಸ್ತ ಸನ್ಯಾಸಿನಿಯರ ಪ್ರಕರಣಕ್ಕೂ ನೆರೆ ಪರಿಹಾರ ಕಾರ್ಯಕ್ರಮಕ್ಕೂ ಏನಾದರೂ ಸಂಬಂಧವಿದೆಯೇ ಎಂದೂ ಪ್ರಶ್ನಿಸಿದ್ದರು.

ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಇದೀಗ ಈ ಹೇಳಿಕೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ತನ್ನ ಹೇಳಿಕೆ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಪತ್ರಿಕೋದ್ಯಮಕ್ಕೆ ನೋವುಂಟು ಮಾಡುವ ಉದ್ದೇಶ ಹೊಂದಿಲ್ಲ. ತನ್ನ ಹೇಳಿಕೆಯಿಂದ ಪ್ರಶ್ನೆ ಕೇಳಿದ ವ್ಯಕ್ತಿಗೆ ನೋವಾಗಿದ್ದರೆ, ದಯವಿಟ್ಟು ನಿಮ್ಮ ಹಿರಿಯ ಸಹೋದರ ಎಂದು ಪರಿಗಣಿಸಿ ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ. ನೆರೆ ಪರಿಹಾರ ವಿತರಣೆಯ ಕುರಿತು ನಾನು ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡುತ್ತಿರುವಾಗ ಈ ಪ್ರಶ್ನೆ ಎತ್ತಲಾಗಿದೆ. ಇದು ಆ ಸಂದರ್ಭಕ್ಕೆ ಪೂರಕವಾಗಿರಲಿಲ್ಲ. ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ ಈಗ ಖಂಡಿತಾ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ವಿಷಯವಾಗಿದೆ. ಆದರೆ ಆಗ ನಾನು ಬೇರೆಯೇ ಮನಸ್ಥಿತಿಯಲ್ಲಿದ್ದೆ. ಆದ್ದರಿಂದ ಇಂತಹ ಪ್ರತಿಕ್ರಿಯೆ ಬಂದಿದೆ ಎಂದು ಮೋಹನ್‌ಲಾಲ್ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News