ಜನವರಿಯಲ್ಲಿ ಚಂದ್ರಯಾನ-2 ಕ್ಕೆ ಚಾಲನೆಯ ನಿರೀಕ್ಷೆ

Update: 2018-09-17 15:08 GMT

ಶ್ರೀಹರಿಕೋಟಾ, ಸೆ.17: ಚಂದ್ರನೆಡೆಗೆ ಭಾರತದ ದ್ವಿತೀಯ ಪಯಣ, ಚಂದ್ರಯಾನ-2 ಯೋಜನೆಗೆ ಮುಂದಿನ ವರ್ಷದ ಜನವರಿ 3ರಂದು ಚಾಲನೆ ದೊರಕುವ ನಿರೀಕ್ಷೆಯಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ದಕ್ಷಿಣ ಧ್ರುವದ ಸಮೀಪಕ್ಕೆ ಸಾಗುವ ಪ್ರಪ್ರಥಮ ಯೋಜನೆ ಇದಾಗಿದೆ. ಜನವರಿ 3ರಿಂದ ಫೆ.16ರವರೆಗಿನ ಅವಧಿಯೊಳಗೆ ಈ ಯೋಜನೆಗೆ ಚಾಲನೆ ದೊರಕಲಿದೆ. ಬಹುತೇಕ ಜನವರಿ 3ರಂದೇ ಚಾಲನೆ ದೊರಕಬಹುದು ಎಂದು ಶಿವನ್ ತಿಳಿಸಿದ್ದಾರೆ.

 ರವಿವಾರ ಇಸ್ರೋದಿಂದ ಬ್ರಿಟನ್‌ನ ನೋವಾಎಸ್‌ಎಆರ್ ಮತ್ತು ಎಸ್1-4 ವಾಣಿಜ್ಯ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಿವನ್, ಮುಂದಿನ ಎಂಟು ತಿಂಗಳೊಳಗೆ 10 ಉಪಗ್ರಹಗಳನ್ನು ಹಾಗೂ 8 ಉಡಾವಣೆ ವಾಹನಗಳನ್ನು ಎರಡು ವಾರಕ್ಕೆ ಒಂದರಂತೆ ಉಡ್ಡಯನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನೋವಾ ಎಸ್‌ಎಆರ್ ಉಪಗ್ರಹವನ್ನು ಬ್ರಿಟನ್‌ನ ಸರ್ರೆ ಸ್ಯಾಟಿಲೈಟ್ ಟೆಕ್ನಾಲಜೀಸ್ ಸಂಸ್ಥೆ ರೂಪಿಸಿದ್ದು ಸುಮಾರು 889 ಕಿ.ಗ್ರಾಂ ತೂಕವಿದೆ. ಹಗಲು- ರಾತ್ರಿ ವೀಕ್ಷಣೆಯ ಸಾಮರ್ಥ್ಯ ಹೊಂದಿರುವ ಈ ಉಪಗ್ರಹ ಹಡಗುಗಳ ಪಥ ನಿರ್ದೇಶನ, ಸಂಪನ್ಮೂಲಗಳ ಪತ್ತೆ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ನೆರವಾಗಲಿದೆ. ಎಸ್1-4 ಉಪಗ್ರಹ ಸಂಪನ್ಮೂಲಗಳ ಸಮೀಕ್ಷೆ, ಪ್ರಾಕೃತಿಕ ನಿಗಾ, ನಗರ ನಿರ್ವಹಣೆ, ಪ್ರಾಕೃತಿಕ ವಿಕೋಪ ನಿರ್ವಹಣೆಗೆ ನೆರವಾಗುತ್ತದೆ. ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ಗೆ ಪರಿಹಾರ ಮೊತ್ತ ಪಾವತಿಸಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಶಿವನ್, ಈ ಪ್ರಕರಣ ಇಸ್ರೋಗೆ ಸಂಬಂಧಿಸಿದ್ದಲ್ಲ, ಕೇರಳ ಸರಕಾರಕ್ಕೆ ಸಂಬಂಧಿಸಿದ್ದು. ನಂಬಿ ನಾರಾಯಣನ್ ಬಂಧನ ಸರಿಯಲ್ಲ ಎಂದು ತಿಳಿದೊಡನೆ ಅವರನ್ನು ಇಸ್ರೋಗೆ ವಾಪಾಸು ಕರೆಸಲಾಗಿದೆ ಎಂದುತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News