ಕಳ್ಳನೆಂಬ ಶಂಕೆಯಲ್ಲಿ ಗುಂಪಿನಿಂದ ವ್ಯಕ್ತಿಯ ಕೊಲೆ: ಪ್ರೇಕ್ಷಕರಂತೆ ನೋಡುತ್ತಿದ್ದ ನಾಲ್ವರು ಪೊಲೀಸರ ಅಮಾನತು

Update: 2018-09-17 15:27 GMT

 ಇಂಫಾಲ, ಸೆ.17: ದ್ವಿಚಕ್ರ ವಾಹನವೊಂದನ್ನು ಕದ್ದಿರುವ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಥಳಿಸಲಾಗಿದ್ದು ತೀವ್ರ ಗಾಯಗೊಂಡಿದ್ದ ವ್ಯಕ್ತಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ, ಗುಂಪು ಹಲ್ಲೆ ನಡೆಸುತ್ತಿದ್ದರೂ ಸಬ್‌ಇನ್‌ಸ್ಪೆಕ್ಟರ್ ಸಹಿತ ನಾಲ್ವರು ಪೊಲೀಸರು ಮೂಕಪ್ರೇಕ್ಷಕರಂತೆ ನಿಂತು ನೋಡುತ್ತಿದ್ದ ವೀಡಿಯೊ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವಂತೆಯೇ ನಾಲ್ವರನ್ನೂ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜೋಗೇಶ್ವರ್ ಹೋಬಿಜಾಮ್ ತಿಳಿಸಿದ್ದಾರೆ.

ಮಣಿಪುರದ ಥರೋಯ್‌ಜಾಮ್ ಎಂಬಲ್ಲಿ ಗುರುವಾರ ಈ ಘಟನೆ ನಡೆದಿದೆ. ಥೌಬಾಲ್ ಜಿಲ್ಲೆಯ ನಿವಾಸಿ ಫರೂಕ್ ಖಾನ್ ಎಂಬ ವ್ಯಕ್ತಿ ದ್ವಿಚಕ್ರ ವಾಹನ ಕಳವು ಮಾಡಿದ್ದಾನೆ ಎಂಬ ಶಂಕೆಯಲ್ಲಿ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಆತ ನೋವಿನಿಂದ ಕಿರುಚಾಡುತ್ತಿರುವುದು ವೀಡಿಯೊ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಈತನೊಂದಿಗಿದ್ದ ಇತರ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರು ಕಾರೊಂದಕ್ಕೆ ಬೆಂಕಿ ಹಚ್ಚಿದ್ದು ಫರೂಕ್ ಖಾನ್ ಹಾಗೂ ಆತನೊಂದಿಗೆ ಇದ್ದವರು ಪ್ರಯಾಣಿಸುತ್ತಿದ್ದ ಕಾರು ಇದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಖಾನ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿ ಓರ್ವ ಕಾನ್‌ಸ್ಟೇಬಲ್ ಸಹಿತ ಐವರನ್ನು ಬಂಧಿಸಲಾಗಿದೆ. ಪ್ರಕರಣವನ್ನು ಖಂಡಿಸಿರುವ ಮಣಿಪುರ ಮಾನವ ಹಕ್ಕುಗಳ ಆಯೋಗ, ಪ್ರಕರಣದ ತನಿಖೆ ನಡೆಸಿ ಸೆ.22ರೊಳಗೆ ವರದಿ ಒಪ್ಪಿಸುವಂತೆ ಡಿಐಜಿಗೆ ಸೂಚಿಸಿದೆ. ಘಟನೆಯ ಬಗ್ಗೆ ಕ್ಷಿಪ್ರವಾಗಿ ತನಿಖೆ ನಡೆಸುವಂತೆ ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News