ಆ್ಯಸಿಡ್ ದಾಳಿಗೆ ಒಳಗಾದ ನಿಖಾ ಹಲಾಲ್ ವಿರುದ್ಧದ ಪ್ರತಿವಾದಿಗೆ ಭದ್ರತೆ ಒದಗಿಸುವಂತೆ ಸುಪ್ರೀಂ ಸೂಚನೆ

Update: 2018-09-17 16:20 GMT

ಹೊಸದಿಲ್ಲಿ, ಸೆ.17: ತ್ರಿವಳಿ ತಲಾಕನ್ನು ಸ್ವೀಕರಿಸಲು ಒಪ್ಪದ ಮತ್ತು ನಿಖಾ ಹಲಾಲ್‌ಗೆ ಮಾಡಲು ನಿರಾಕರಿಸಿದ ಕಾರಣಕ್ಕೆ ಆ್ಯಸಿಡ್ ದಾಳಿಗೊಳಗಾದ ಮಹಿಳೆಗೆ ಉಚಿತ ವೈದ್ಯಕೀಯ ನೆರವು ಮತ್ತು ಸೂಕ್ತ ಭದ್ರತೆಯನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ.

ಬುಲಂದ್‌ಶೆಹೆರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಈ ಮಹಿಳೆಯ ಸುರಕ್ಷತೆ ಮತ್ತು ಭದ್ರತೆಯ ಜವಾಬ್ದಾರಿಯನ್ನು ಹೊರಬೇಕು ಎಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ನ್ಯಾಯಾಧೀಶರಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯ ಪೀಠ ಆದೇಶಿಸಿದೆ. ಸಂತ್ರಸ್ತ ಮಹಿಳೆಗೆ ಕಾನೂನಿನನ್ವಯ ಸಿಗಬೇಕಾದ ಪರಿಹಾರವನ್ನೂ ಒದಗಿಸಬೇಕೆಂದು ಶ್ರೇಷ್ಠ ನ್ಯಾಯಾಲಯ ಆದೇಶಿಸಿದೆ.

ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಅನಿಸಿದರೆ ತಮ್ಮ ವ್ಯಾಪ್ತಿಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಭದ್ರತೆಯನ್ನು ಒದಗಿಸುವಂತೆ ಕೇಳುವಂತೆ ಬಹುಪತ್ನಿತ್ವ ಮತ್ತು ನಿಖಾ ಹಲಾಲ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಮಹಿಳೆಯರಿಗೆ ನ್ಯಾಯಪೀಠ ಸೂಚಿಸಿದೆ. ಉತ್ತರ ಪ್ರದೇಶದ ಬುಲಂದ್‌ಶೆಹೆರ್ ನಿವಾಸಿ ಮಹಿಳೆಯ ಮೇಲೆ ಸೆಪ್ಟಂಬರ್ 13ರಂದು ಆಕೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳುತ್ತಿದ್ದ ಸಂದರ್ಭ ಆಕೆಯ ಬಾಮೈದ ದಾಳಿ ನಡೆಸಿದ್ದ. ದಾಳಿಯ ನಂತರ ಆಕೆ ತನಗೆ ಚಿಕಿತ್ಸೆ ಮತ್ತು ಭದ್ರತೆ ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಶುಕ್ರವಾರದಂದು ಉತ್ತರ ಪ್ರದೇಶ ಸರಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News