ದೇನಾ ಬ್ಯಾಂಕ್, ವಿಜಯ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ವಿಲೀನಕ್ಕೆ ನಿರ್ಧಾರ

Update: 2018-09-17 17:01 GMT

ಹೊಸದಿಲ್ಲಿ,ಸೆ.17: ಸರಕಾರಿ ಸ್ವಾಮ್ಯದ ದೇನಾ ಬ್ಯಾಂಕ್,ವಿಜಯ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾಗಳನ್ನು ಕೇಂದ್ರವು ವಿಲೀನಗೊಳಿಸಲಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ ಅವರು ಸೋಮವಾರ ಇಲ್ಲಿ ಪ್ರಕಟಿಸಿದರು.

ವಿಲೀನದ ಬಳಿಕ ಇದು ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್ ಆಗಲಿದ್ದು,ಸರಕಾರದ ಬಂಡವಾಳ ಬೆಂಬಲ ಮುಂದುವರಿಯಲಿದೆ. ಮೂರೂ ಬ್ಯಾಂಕುಗಳ ಆಡಳಿತ ಮಂಡಳಿಗಳು ವಿಲೀನ ಪ್ರಸ್ತಾವವನ್ನು ಪರಿಶೀಲಿಸಲಿವೆ. ವಿಲೀನದವರೆಗೂ ಮೂರೂ ಬ್ಯಾಂಕ್‌ಗಳು ಪ್ರತ್ಯೇಕ ಕಾರ್ಯ ನಿರ್ವಹಣೆಯನ್ನು ಮುಂದುವರಿಸಲಿವೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸರಕಾರವು ಆಶಿಸಿದೆ. ನೂತನ ವಿಲೀನೀಕೃತ ಬ್ಯಾಂಕ್ 14.82 ಲಕ್ಷ ಕೋ.ರೂ.ಗಳಷ್ಟು ಒಟ್ಟು ವ್ಯವಹಾರವನ್ನು ಹೊಂದಿರಲಿದೆ. ನೂತನ ಬ್ಯಾಂಕಿನ ಹೆಸರನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ.

 ಯಾವುದೇ ಸಿಬ್ಬಂದಿಗೆ ವ್ಯತಿರಿಕ್ತ ಸೇವಾ ಷರತ್ತುಗಳನ್ನು ವಿಧಿಸಲಾಗುವುದಿಲ್ಲ. ಎಲ್ಲರಿಗೂ ಅತ್ಯುತ್ತಮ ಸೇವಾ ಷರತ್ತುಗಳನ್ನು ಅನ್ವಯಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು,ಬ್ಯಾಂಕಿಂಗ್ ಕ್ಷೇತ್ರದ ಸಾಲನೀಡಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು.

ಕೇಂದ್ರ ಮುಂಗಡಪತ್ರದಲ್ಲಿ ಬ್ಯಾಂಕುಗಳ ವಿಲೀನವನ್ನು ಪ್ರಕಟಿಸಲಾಗಿತ್ತು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News