ಯುಎಪಿಎ ಅಡಿ ಮಾನವ ಹಕ್ಕು ಹೋರಾಟಗಾರ ಟಿ.ಗಾಂಧಿ ರಿಮಾಂಡ್‌ಗೆ ನ್ಯಾಯಾಲಯದ ಅಸಮ್ಮತಿ

Update: 2018-09-17 17:02 GMT

ಚೆನ್ನೈ, ಸೆ.17: ಚೆನ್ನೈನ ನ್ಯಾಯಾಲಯವೊಂದು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ಮಾನವ ಹಕ್ಕು ಹೋರಾಟಗಾರ ತಿರುಮುರುಗನ್ ಗಾಂಧಿ ಅವರ ರಿಮಾಂಡ್ ವಿರುದ್ಧ ಸೋಮವಾರ ಆದೇಶವನ್ನು ಹೊರಡಿಸಿದೆ. ಈ ಕಾಯ್ದೆಯಡಿ ಅವರ ವಿರುದ್ಧ ಆರೋಪಗಳನ್ನು ಹೊರಿಸಲು ಯಾವುದೇ ಆಧಾರಗಳಿಲ್ಲ ಎಂದು ಅದು ಹೇಳಿದೆ. ಗಾಂಧಿಯವರನ್ನು ಈಗ ಐಪಿಸಿಯ ಕಲಂ 505ರಡಿ ರಿಮಾಂಡ್‌ಗೆ ಕಳುಹಿಸಲಾಗುವುದು.

ಗಾಂಧಿ(42) ಅವರು ಪ್ರಮುಖ ನಾಗರಿಕ ಹಕ್ಕುಗಳ ಗುಂಪು ಮೇ 17 ಮೂವ್‌ಮೆಂಟ್‌ನ ಸಂಚಾಲಕರಾಗಿದ್ದಾರೆ.

2017ರ ಸಭೆಯೊಂದರಲ್ಲಿ ಫೆಲೆಸ್ತೀನಿಯನ್ ಹೋರಾಟ ಮತ್ತು ತಮಿಳು ಈಳಂ ಪರ ಬೆಂಬಲವನ್ನು ವ್ಯಕ್ತಪಡಿಸಿದ್ದ ಅವರ ವಿರುದ್ಧ ಕಳೆದ ತಿಂಗಳು ಯುಎಪಿಎ ಅಡಿ ಪ್ರಕರಣವನ್ನು ದಾಖಲಿಸಲಾಗಿತ್ತು.

ಕಳೆದ ತಿಂಗಳು ಜಿನಿವಾದಿಂದ ವಾಪಸಾಗುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಜಿನಿವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನದಲ್ಲಿ ಮೇ 22ರಂದು ತೂತ್ತುಕುಡಿಯಲ್ಲಿ ಸ್ಟರ್ಲೈಟ್ ವಿರೋಧಿ ಪ್ರತಿಭಟನಾಕಾರರ ಮೇಲೆ ನಡೆದಿದ್ದ ಪೊಲೀಸ್ ಗೋಳಿಬಾರ್‌ನ ಕುರಿತು ಅವರು ಮಾತನಾಡಿದ್ದರು. ಈ ಸಂಬಂಧ ಅವರ ವಿರುದ್ಧ ಐಪಿಸಿಯ ವಿವಿಧ ಕಲಮ್‌ಗಳಡಿ ಅರೋಪಗಳನ್ನು ಹೊರಿಸಲಾಗಿತ್ತು.

ಗಾಂಧಿ ಎಂಟು ಪಥಗಳ ಚೆನ್ನೈ-ಸೇಲಂ ಹಸಿರು ಕಾರಿಡಾರ್ ವಿರುದ್ಧವೂ ಅಭಿಯಾನ ನಡೆಸುತ್ತಿದ್ದಾರೆ. ಪ್ರತಿಭಟನೆಗಳು,ಮೆರವಣಿಗೆಗಳು ಇತ್ಯಾದಿಗಳನ್ನು ಆಯೋಜಿಸಿದ್ದಕ್ಕಾಗಿ ಚೆನೈ ಪೊಲೀಸರು ಅವರ ವಿರುದ್ಧ 22 ಪ್ರಕರಣಗಳನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News