ಸಿಬಿಎಸ್ ಇ ಟಾಪರ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಅಸ್ವಸ್ಥಳಾದಾಗ ವೈದ್ಯರಿಗೆ ಕರೆ ಮಾಡಿದ್ದ ಆರೋಪಿ

Update: 2018-09-17 17:18 GMT

ಚಂಡೀಗಢ, ಸೆ.17: ಹರ್ಯಾಣದಲ್ಲಿ ಕಳೆದ ವಾರ ನಡೆದ 19ರ ಹರೆಯದ ಯುವತಿಯ ಅತ್ಯಾಚಾರ ಘಟನೆಯ ಸಂದರ್ಭ ಸಂತ್ರಸ್ತ ಯುವತಿ ತೀವ್ರ ಅಸ್ವಸ್ಥಳಾದಾಗ ಪ್ರಮುಖ ಆರೋಪಿ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿ ತೀವ್ರ ಅಸ್ವಸ್ಥಳಾದಾಗ ಆಕೆಯನ್ನು ಅಪಹರಿಸಿದ್ದ ಪ್ರಮುಖ ಆರೋಪಿ ನಿಷು ಎಂಬಾತ ಡಾ ಸಂಜೀವ್ ಎಂಬವರಿಗೆ ಕರೆ ಮಾಡಿ ಕರೆಸಿಕೊಂಡು ಆಕೆಗೆ ಚಿಕಿತ್ಸೆ ಒದಗಿಸಿದ್ದ . ಸಂಜೀವ್ ಹಾಗೂ ಘಟನೆ ನಡೆದ ಜಮೀನಿನ  ಮಾಲಕ ದೀನದಯಾಳ್ ಎಂಬಾತನನ್ನೂ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವೈದ್ಯರೂ ಅತ್ಯಾಚಾರ ಪ್ರಕರಣದಲ್ಲಿ ಶಾಮೀಲಾಗಿರುವ ಸಾಧ್ಯತೆಯಿದೆ. ಅತ್ಯಾಚಾರ ನಡೆದ ಸಂದರ್ಭ ಅಲ್ಲಿದ್ದರೂ ಡಾ ಸಂಜೀವ್ ಪೊಲೀಸರಿಗೆ ಮಾಹಿತಿ ನೀಡದೆ ತಪ್ಪೆಸಗಿದ್ದಾರೆ. ಆದ್ದರಿಂದ ಅವರೂ ಅತ್ಯಾಚಾರ ನಡೆಸಿರುವ ಸಾಧ್ಯತೆಯಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಇದು ಸ್ಪಷ್ಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಯುವತಿಯನ್ನು ಅಪಹರಿಸಿದ್ದ ನಿಷು ತಕ್ಷಣ ದೀನ್‌ದಯಾಳ್‌ಗೆ ಫೋನ್ ಮಾಡಿ ವಿಷಯ ತಿಳಿಸಿ ಕೋಣೆಯೊಂದರ ವ್ಯವಸ್ಥೆ ಮಾಡುವಂತೆ ತಿಳಿಸಿದ್ದ. ಅಲ್ಲದೆ ಕೋಣೆಯ ಬೀಗದ ಕೀಯನ್ನು ಆರೋಪಿಗಳು ತನ್ನಿಂದ ಕೊಂಡು ಹೋಗಿರುವುದನ್ನೂ ದೀನ್‌ದಯಾಳ್ ಪೊಲೀಸರಿಗೆ ತಿಳಿಸಿದ್ದಾನೆ. ದುಷ್ಕೃತ್ಯ ನಡೆಯುವ ಮಾಹಿತಿ ಇದ್ದರೂ ದೀನ್‌ದಯಾಳ್ ಪೊಲೀಸರಿಗೆ ತಿಳಿಸದೆ ಆರೋಪಿಗಳಿಗೆ ಸಹಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನನ್ನು ಅಪಹರಿಸಿದ್ದ ಮೂವರಲ್ಲದೆ, ಸ್ಥಳದಲ್ಲಿದ್ದ ಇನ್ನೂ ಕೆಲವರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದು ಎಲ್ಲರೂ ತನ್ನ ಗ್ರಾಮದವರೇ ಆಗಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ. ಈ ಮಧ್ಯೆ, ಸೇನಾ ಯೋಧ ಸೇರಿದಂತೆ ಇತರ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಯುವತಿ ಚೇತರಿಸಿಕೊಂಡಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News