ಸಾಲ ಕೊಡಿಸಿದ್ದು ಯಾರು? ಲಂಡನ್‌ಗೆ ಬೀಳ್ಕೊಟ್ಟದ್ದು ಯಾರು?

Update: 2018-09-17 18:32 GMT

ವಿಜಯ ಮಲ್ಯ 2016ರ ಮಾರ್ಚ್ 2ರಂದು ಓಡಿ ಹೋದ ಹಿಂದಿನ ವಾರದ ವಿದ್ಯಮಾನಗಳನ್ನು ಗಮನಿಸಿದರೆ, ಈ ಫಿಕ್ಸಿಂಗ್‌ನಲ್ಲಿ ಬ್ಯಾಂಕ್ ಒಕ್ಕೂಟ ಮತ್ತು ಸಿಬಿಐ ಭಾಗವಹಿಸಿದ್ದು ಗೋಚರಿಸುತ್ತದೆ. ‘ಚೌಕಿದಾರ’ರ ಕಣ್ಣು ತಪ್ಪಿಸಿ ಇದೆಲ್ಲ ನಡೆಯಲು ಸಾಧ್ಯವೇ? ಓದಿ, ನೀವೇ ತೀರ್ಮಾನಿಸಿ.

ನಮ್ಮ ಬಹುಪಾಲು ಮಾಧ್ಯಮಗಳು ವಿಜಯ ಮಲ್ಯ ಎಂಬ ಲೂಟಿಕೋರನ ವೃತ್ತಾಂತದ ಸುದ್ದಿ, ಚರ್ಚೆಗಳನ್ನು ಯಾವ ಮಟ್ಟಕ್ಕೆ ತೆಗೆದುಕೊಂಡಿವೆ ಹೋಗಿವೆ ಎಂದರೆ, ಹಾರುವ ಮುನ್ನ ಮಲ್ಯ ಜೇಟ್ಲಿಗೆ ಎಲ್ಲ ಹೇಳಿಯೇ ಹೋದರೆ? ಅಥವಾ ಜೇಟ್ಲಿ ಕೇವಲ 10-15 ಸೆಕೆಂಡಷ್ಟೇ ಮಾತಾಡಿದರೆ? ಎಂಬ ಪ್ರಶೆಗಳಲ್ಲಿಯೇ ಕಾಲ ಕಳೆಯತೊಡಗಿವೆ. ಇಂತಹ ಮಾಧ್ಯಮಗಳ ವರದಿ, ಚರ್ಚೆ ನೋಡಿ, ತಮ್ಮ ಆಲೋಚನಾ ಕ್ರಮಗಳನ್ನು ರೂಪಿಸಿಕೊಂಡ ಹೊಸ ತಲೆಮಾರು ಸಾಮಾಜಿಕ ಜಾಲತಾಣಗಳಲ್ಲಿ ಈ ಚರ್ಚೆಯನ್ನು ಇನ್ನಷ್ಟು ಕೆಳಮಟ್ಟಕ್ಕೆ ಒಯ್ದಿದೆ. ಮಲ್ಯಗೆ ಅಪಾರ ಪ್ರಮಾಣದ ಸಾಲ ಸಿಗಲು ಯುಪಿಎ-2 ಸರಕಾರ ಕಾರಣ ಎನ್ನುವವರ ಒಂದು ಗುಂಪು, ಎಲ್ಲ ಸಾಕ್ಷ್ಯಾಧಾರಗಳಿದ್ದರೂ ಮಲ್ಯರನ್ನು ಬೀಳ್ಕೊಟ್ಟಿದ್ದು ಎನ್‌ಡಿಎ ಸರಕಾರ ಎಂದು ಒಂದು ಗುಂಪು ಅರಚಾಡುತ್ತಿವೆ.

ಇವೆಲ್ಲದರ ನಡುವೆ ಒಟ್ಟು ಆಡಳಿತ ವ್ಯವಸ್ಥೆ ಬಂಡವಾಳಶಾಹಿಗಳ ಪರ ಇರುವ, ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂಬ ಸತ್ಯ ಗದ್ದಲದಲ್ಲಿ ಅಡಗಿ ಹೋಗುತ್ತಿದೆ. ನಾಲ್ಕು ವರ್ಷಗಳ ಹೊಸ ಟ್ರೆಂಡ್ ಎಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ, ಅದರಲ್ಲೂ ಮೋದಿ ಪರ ಗುಂಪು ಸಾಕಷ್ಟು ಬೆಳೆದಿದ್ದು, ಅದು ವ್ಯಕ್ತಿಪೂಜೆಗೆ ಇಳಿದ ಪರಿಣಾಮ ಪುಂಖಾನುಪುಂಖವಾಗಿ ಸುಳ್ಳುಗಳನ್ನು ಹರಡುತ್ತಿದೆ. ಆಳುವ ಸರಕಾರದ ತಪ್ಪುಗಳನ್ನು ಮುಚ್ಚಲು ಅದು, ಹಿಂದಿನ ಸರಕಾರದ ಕಡೆ ಬೊಟ್ಟು ಮಾಡುತ್ತದೆ! ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರು ಪಡುತ್ತಿರುವ ಯಾತನೆ ಈ ಚರ್ಚಾಪಟುಗಳಿಗೆ ಮುಖ್ಯವಲ್ಲ, ಮಲ್ಯರಂತಹವರು ಎತ್ತಿಕೊಂಡು ಹೋದ ಸಾವಿರಾರು ಕೋಟಿ ರೂ. ಈ ದೇಶದ ಜನರದ್ದಲ್ಲವೇ ಎಂಬ ಪ್ರಶ್ನೆಯೂ ಅವರಿಗೆ ಮುಖ್ಯವೇ ಆಗುತ್ತಿಲ್ಲ. ವಿಜಯ ಮಲ್ಯ ಲಂಡನ್‌ಗೆ ಹಾರಿದ್ದು 2016ರ ಮಾರ್ಚ್ 2ರಂದು. ಆದರೆ ಆತನ ವಿರುದ್ಧದ ಬ್ಯಾಂಕ್ ಮತ್ತು ಸಿಬಿಐ ತನಿಖೆಗಳು 2015ರ ಮಧ್ಯದಲ್ಲೇ ಚುರುಕುಗೊಂಡಿದ್ದವು.

ಈ ಕೆಳಗಿನ ವಿದ್ಯಮಾನಗಳನ್ನು ಗಮನಿಸಿ:
2012-13: ನಷ್ಟದಲ್ಲಿದ್ದ ಕಿಂಗ್‌ಫಿಶರ್ ಪುನಶ್ಚೇತನಕ್ಕೆಂದು ವಿಜಯ ಮಲ್ಯಗೆ ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ.

2014ರ ಆರಂಭ: ಸಿಬಿಐನಿಂದ ವಸೂಲಾಗದ ಸಾಲ (ಎನ್‌ಪಿಎ) ಪ್ರಕರಣಗಳ ಪರಿಶೀಲನೆ ಆರಂಭ.

2014, ಮಾರ್ಚ್: ಸಿಬಿಐನ ‘ಬ್ಯಾಂಕ್ ಸುರಕ್ಷತೆಗಳು ಮತ್ತು ವಂಚನೆ ವಿಭಾಗ’ವು ಎಸ್‌ಬಿಐನ ವಿವಿಧ ಕಚೇರಿಗಳನ್ನು ಸಂಪರ್ಕಿಸಿ, ಕಿಂಗ್‌ಫಿಶರ್ ಏರ್‌ಲೈನ್ಸ್ ಪ್ರಕರಣದ ದಾಖಲೆಗಳನ್ನು ಕೇಳಿತು.

‘‘ಸಾಲ ವಸೂಲಾತಿ ಪ್ರಕ್ರಿಯೆ ನಡೆಯುತ್ತಿದೆ. ಸದ್ಯಕ್ಕೆ ವಂಚನೆಯ ವಾಸನೆ ಕಂಡು ಬಂದಿಲ್ಲ’’ ಎಂದು ಬ್ಯಾಂಕ್ ಹೇಳಿತು. 2014ರ ಮಧ್ಯದವರೆಗೂ ಇದೊಂದು ‘ಕೆಟ್ಟ ಎನ್‌ಪಿಎ’ ಪ್ರಕರಣ ಎನ್ನುತ್ತಿದ್ದ ಬ್ಯಾಂಕ್‌ಗಳು ನಂತರದಲ್ಲಿ ಪ್ರಕರಣದ ಗಂಭೀರತೆ ಅರಿಯತೊಡಗಿದವು.

2014, ಅಗಸ್ಟ್: ಐಡಿಬಿಐ ಬ್ಯಾಂಕ್‌ನಿಂದ ಕಿಂಗ್‌ಫಿಶರ್ ಪಡೆದಿದ್ದ 950 ಕೋಟಿ ರೂ. ಸಾಲಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಾಥಮಿಕ ತನಿಖೆಯ ಕೇಸು ದಾಖಲಿಸಿತು. ಇದೇ ತಿಂಗಳಿನಿಂದ ಎಸ್‌ಬಿಐ, ಯುಬಿಐ, ಪಿಎಬಿ ಮುಂತಾದ ಬ್ಯಾಂಕ್‌ಗಳು ಮಲ್ಯರನ್ನು ‘ಉದ್ದೇಶಪೂರ್ವಕ ತಪ್ಪಿತಸ್ಥ’ ಎಂದು ಘೋಷಣೆ ಮಾಡಲು ಆರಂಭಿಸಿದವು.

2015: ಇಡೀ ವರ್ಷದುದ್ದಕ್ಕೂ ಬ್ಯಾಂಕುಗಳು ಮಲ್ಯರನ್ನು ‘ಉದ್ದೇಶಪೂರ್ವಕ ತಪ್ಪಿತಸ್ಥ’ ಎಂದು ಘೋಷಿಸಿದವು ಮತ್ತು ಸಿಬಿಐ ತನಿಖೆ-ಎರಡೂ ಏಕಕಾಲದಲ್ಲಿ ನಡೆದವು.

2015, ಜುಲೈ: ಐಡಿಬಿಐ ಸಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಫಿಶರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತು.

2015, ಅಕ್ಟೋಬರ್, 10: ಮಲ್ಯರ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ.

ಇಲ್ಲಿಂದ ಶುರುವಾಯ್ತು ರೋಚಕ ಆಟ!
2015, ಅಕ್ಟೋಬರ್ 16:  ಮಲ್ಯ ವಿರುದ್ಧ ಸಿಬಿಐನಿಂದ ಲುಕ್-ಔಟ್ ಸುತ್ತೋಲೆ (ಔಟಇ). ಆಗ ಮಲ್ಯ ಲಂಡನ್ ಹೋಗಿದ್ದರು.
2015, ನವೆಂಬರ್: ‘ಭಾರತೀಯ ವಲಸೆ ದಳ’ವು ಮಲ್ಯರನ್ನು ವಶಕ್ಕೆ ಪಡೆಯುವ ಸೂಚನೆ ಜಾರಿ ಮಾಡುವುದು ಅಗತ್ಯವೇ? ಎಂದು ಸಿಬಿಐಗೆ ಕೇಳಿತು. ‘‘ಸದ್ಯಕ್ಕೆ ಅಗತ್ಯವಿಲ್ಲ. ಇನ್ನಷ್ಟು ದಾಖಲೆ ಸಂಗ್ರಹಿಸುತ್ತಿದ್ದೇವೆ, ಮಲ್ಯ ರಾಜ್ಯಸಭಾ ಸದಸ್ಯರಾಗಿರುವುದರಿಂದ ವಶ ಅಥವಾ ಬಂಧನದ ಸುತ್ತೋಲೆ ಅಗತ್ಯವಿಲ್ಲ’’ ಎಂದಿತು ಸಿಬಿಐ.

 ಸಿಬಿಐನಿಂದ 2ನೇ ಲುಕ್-ಔಟ್ ಸುತ್ತೋಲೆ : ಎಸ್ಕೇಪ್ ಡೀಲ್ ಪಕ್ಕಾ!
2015, ನವೆಂಬರ್, 23: ಸಿಬಿಐ 2ನೇ ಲುಕ್-ಔಟ್ ಸುತ್ತೋಲೆ ಹೊರಡಿಸಿತು. ಈಗ ಅದು ಹೇಳುತ್ತಿದೆ, ಈ ಸುತ್ತೋಲೆಯಲ್ಲೇ ಒಂದು ಸಣ್ಣ ಯಡವಟ್ಟಾಗಿತ್ತು ಎಂದು! ವಶ ಅಥವಾ ಬಂಧನ ಎಂದಿರುವಲ್ಲಿ ಬರೀ ಮಾಹಿತಿ ನೀಡುವುದು ಎಂದು ಆಕಸ್ಮಿಕ ತಪ್ಪಾಗಿತ್ತು ಎಂದು ಕೆಲವು ದಿನಗಳಿಂದ ಸಿಬಿಐ ತನ್ನ ತಪ್ಪುಒಪ್ಪಿಕೊಳ್ಳುತ್ತಿದೆ. ಈ ಉದ್ದೇಶಿತ, ಗಂಭೀರ ಲೋಪದ ಹಿಂದೆ ಸರಕಾರದ ಕೈವಾಡ ಇರದೇ ಇರುತ್ತಾ ಎಂಬ ಪ್ರಶ್ನೆಯನ್ನು ನಾವೆಲ್ಲ ಕೇಳಬೇಕಿದೆ.

2015, ಡಿಸೆಂಬರ್: ಭಾರತಲ್ಲಿದ್ದ ಮಲ್ಯ ಮೂರು ಕೋರ್ಟು ವಿಚಾರಣೆಗಳಿಗೆ ಹಾಜರಾಗಿದ್ದರು. ಆಗೆಲ್ಲ ಬ್ಯಾಂಕುಗಳು, ಸಿಬಿಐ ಜಾಣಕುರುಡಿನಲ್ಲಿದ್ದವು. ಸರಕಾರವೋ ಕಪ್ಪುಹಣ ತಂದೇ ಬಿಟ್ಟೆವು ಎಂದು ಬೊಂಬಡಾ ಹೊಡೆಯುತ್ತಲೇ ಇತ್ತು. ಈ ನಡುವೆ ಮಲ್ಯರಿಂದ 500 ಕೋಟಿ ರೂ. ಸೇವಾ ತೆರಿಗೆ ವಸೂಲು ಮಾಡಲು ಸೇವಾ ತೆರಿಗೆ ಇಲಾಖೆ ಹಿಂದೇಟು ಹಾಕುತ್ತ ಬಂದಿತ್ತು. ಮಲ್ಯ ಓಡಿ ಹೋದ ಮೇಲೆ ಬಾಂಬೇ ಹೈಕೋರ್ಟಿಗೆ ಹೋದ ಈ ಇಲಾಖೆ ನ್ಯಾಯಾಧೀಶರಿಂದ ಹಿಗ್ಗಾಮುಗ್ಗಾ ಉಗಿಸಿಕೊಂಡಿತು. ಈ ಇಲಾಖೆ ಮೊದಲೇ ಬ್ಯಾಂಕುಗಳಿಗೆ, ಸಿಬಿಐಗೆ ಈ ವಿಷಯವನ್ನು ಗಮನಕ್ಕೆ ತರದೇ ಆಟದಲ್ಲಿ ತಾನೂ ಸೇರಿಕೊಂಡಿತ್ತು!

2016, ಫೆಬ್ರವರಿ 26: ತಾನು ಮಲ್ಯರೊಂದಿಗೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದು, ಮಲ್ಯ ಅಧ್ಯಕ್ಷ ಹುದ್ದೆ ತೊರೆಯಲಿದ್ದು, ಅವರಿಗೆ ಸೌಹಾರ್ದದ ಭಾಗವಾಗಿ 75 ಮಿಲಿಯನ್ ಡಾಲರ್ ನೀಡುತ್ತಿರುವುದಾಗಿ ಯುನೈಟೆಡ್ ಸ್ಪಿರಿಟ್ಸ್ ಘೋಷಿಸಿತು.
          
ಎಸ್ಕೇಪ್‌ನ ಕ್ಲೈಮಾಕ್ಸ್ ಶುರು!
2016, ಫೆಬ್ರವರಿ 28: ಅವತ್ತು ರವಿವಾರ, ತಿಂಗಳ ಅಂತ್ಯದ ದಿನ. ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಸುಪ್ರೀಂಕೋರ್ಟಿನ ಹಿರಿಯ ವಕೀಲ ದುಷ್ಯಂತ್ ದವೆಯವರನ್ನು ಸಂಪರ್ಕಿಸಿ, ‘‘ಮಲ್ಯ ದೇಶ ತೊರೆಯುವ ಸಾಧ್ಯತೆ ಇವೆ. ಏನು ಮಾಡಬೇಕು?’’ ಎಂದು ಸಲಹೆ ಕೇಳಿತು. ‘‘ನಾಳೆಯೇ (ಸೋಮವಾರ, ಮಾರ್ಚ್, 1) ಸುಪ್ರಿಂಕೋರ್ಟ್ ಮೆಟ್ಟಿಲೇರಿ, ಮಲ್ಯ ದೇಶ ಬಿಟ್ಟು ಹೋಗದಂತೆ ಆದೇಶ ಪಡೆಯಿರಿ’’ ಎಂದು ದವೆಯವರು ಸಲಹೆ ನೀಡಿದರು.

ಆದರೆ ಫೆಬ್ರವರಿ 28ರ ರಾತ್ರಿ ಅದ್ಯಾವ ಶಕ್ತಿ ಒತ್ತಡ ಹಾಕಿತೋ, ಬ್ಯಾಂಕ್ ಒಕ್ಕೂಟವು ಮಾರ್ಚ್ 1ರಂದು ಸುಪ್ರಿಂಕೋರ್ಟ್ ಕಡೆ ಸುಳಿಯಲೇ ಇಲ್ಲ!
 ಅಂದೇ, (ಮಾರ್ಚ್1) ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮಲ್ಯ ಮತ್ತು ಹಣಕಾಸು ಸಚಿವರ ನಡುವೆ 15 ನಿಮಿಷಗಳ ಚರ್ಚೆ ನಡೆದಿತ್ತು ಎಂಬುದನ್ನು ಕಾಂಗ್ರೆಸ್‌ನ ನಾಯಕ ಪಿ.ಎಲ್. ಪುನಿಯಾ ಸಾಕಷ್ಟು ಸಂದರ್ಶನಗಳಲ್ಲಿ ಈ ಹಿಂದೆಯೇ ಹೇಳಿದ್ದಾರೆ. ಭೇಟಿ ನಡೆದಿದ್ದಂತೂ ನಿಜ ಎಂದು ಈಗ ಜೇಟ್ಲಿಯೂ ಒಪ್ಪಿಕೊಂಡಿದ್ದಾರೆ.

2016, ಮಾರ್ಚ್ 2: ಮಲ್ಯ ಲಂಡನ್‌ಗೆ ಎಸ್ಕೇಪ್! ಇದನ್ನು ಬಾಯಿ ತೆರದುಕೊಂಡು ಪೆಕರನಂತೆ ನೋಡುತ್ತ ನಿಂತಿತ್ತು ಸಿಬಿಐ! ಅದು ತಾನೇ ತಯಾರಿಸಿದ ಲುಕ್-ಔಟ್ ನೋಟಿಸಿನಲ್ಲಿ ವಶ; ಅಥವಾ ಬಂಧನ ಎಂಬ ಪದವನ್ನೇ ಕೈಬಿಟ್ಟಿತ್ತು! ಇದು ಕೂಡ ಎಸ್ಕೇಪ್ ಆಟದ ಭಾಗವಲ್ಲದೆ ಇನ್ನೇನು?

Writer - ಪಿ.ಕೆ. ಮಲ್ಲನಗೌಡರ್

contributor

Editor - ಪಿ.ಕೆ. ಮಲ್ಲನಗೌಡರ್

contributor

Similar News