ಏಷ್ಯಾ ಕಪ್: ಅಪ್ಘಾನ್ ಅಬ್ಬರಕ್ಕೆ ಶ್ರೀಲಂಕಾ ತತ್ತರ

Update: 2018-09-18 03:34 GMT

ಅಬುಧಾಬಿ, ಸೆ.18: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಲಿಷ್ಠ ಶ್ರೀಲಂಕಾ ವಿರುದ್ಧ 91 ರನ್ನುಗಳ ಜಯ ದಾಖಲಿಸಿದ ಅಪ್ಘಾನಿಸ್ತಾನ ತಂಡ, ಮಾಜಿ ಚಾಂಪಿಯನ್ನರನ್ನು ಟೂರ್ನಿಯಿಂದ ಹೊರಗಟ್ಟಿ ದಾಖಲೆ ಸೃಷ್ಟಿಸಿತು.

ಟೂರ್ನಿಯಲ್ಲಿ ಉಳಿದುಕೊಳ್ಳಲು ಬಿ ಗುಂಪಿನ ಈ ಪಂದ್ಯದಲ್ಲಿ ಜಯ ಸಾಧಿಸುವುದು ಶ್ರೀಲಂಕಾಗೆ ಅನಿವಾರ್ಯವಾಗಿತ್ತು. ಆದರೆ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ತೋರಿದ ಅಪ್ಘನ್ನರು ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.

250 ರನ್ನುಗಳ ಗೆಲುವಿನ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಸ್ಪಿನ್ನರ್ ರಶೀದ್ ಖಾನ್ (2-26), ಮುಹಮ್ಮದ್ ನಬಿ (2-30) ಮತ್ತು ಮುಜೀಬುರ್ರಹ್ಮಾನ್ (2-32) ಕಡಿವಾಣ ಹಾಕಿದರು. ಐದು ಬಾರಿಯ ಚಾಂಪಿಯನ್ ತಂಡ 41.2 ಓವರ್‌ಗಳಲ್ಲಿ ಆಲೌಟ್ ಆಗಿ ಟೂರ್ನಿಯಿಂದ ಹೊರಬಿದ್ದಿತು.

ಎರಡು ಅನಗತ್ಯ ರನೌಟ್ ಹಾಗೂ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಅವರ ಬೇಜವಾಬ್ದಾರಿಯುತ ಹೊಡೆತದಿಂದ ಅಗ್ಗದ ಮೊತ್ತ (22)ಕ್ಕೆ ಪೆವಿಲಿಯನ್‌ಗೆ ನಡೆಯುವುದರೊಂದಿಗೆ ಒತ್ತಡಕ್ಕೆ ಸಿಲುಕಿದ ಶ್ರೀಲಂಕಾ ತಂಡ ಚೇತರಿಸಿಕೊಳ್ಳಲು ಅಫ್ಘಾನ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಏಕದಿನ ಪಂದ್ಯದ ಇತಿಹಾಸದಲ್ಲಿ ಇದು ಅಪ್ಘಾನ್ ತಂಡ ಶ್ರೀಲಂಕಾ ವಿರುದ್ಧ ಸಾಧಿಸಿದ ಮೊಟ್ಟಮೊದಲ ಜಯವಾಗಿದೆ. 2017ರ ಜನವರಿಯಿಂದೀಚೆಗೆ ನಡೆದ 40 ಪಂದ್ಯಗಳ ಪೈಕಿ 30ನ್ನು ಸೋತಿರುವ ಶ್ರೀಲಂಕಾ, ಕಳೆದ ಶನಿವಾರ ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ 137 ರನ್ನುಗಳ ಹೀನಾಯ ಸೋಲು ಕಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News