ದೇಶದಲ್ಲಿ ಪ್ರತಿ 5 ದಿನಕ್ಕೆ ಒಬ್ಬ ಕಾರ್ಮಿಕ ಶೌಚ ಗುಂಡಿ ಸ್ವಚ್ಛಗೊಳಿಸುವ ವೇಳೆ ಮೃತ್ಯು

Update: 2018-09-18 05:34 GMT

ಹೊಸದಿಲ್ಲಿ, ಸೆ.18: ದೇಶದಲ್ಲಿ 2017ರ ಜನವರಿ 1ರಿಂದ ಪ್ರತಿ ಐದು ದಿನಗಳಿಗೆ ಸರಾಸರಿ ಒಬ್ಬ ವ್ಯಕ್ತಿ  ಶೌಚಾಲಯ ಗುಂಡಿಗಳನ್ನು ಸ್ವಚ್ಛಗೊಳಿಸುವ ಕಾಯಕದ ವೇಳೆ ಸಾವನ್ನಪ್ಪುತ್ತಿದ್ದಾನೆ ಎಂದು ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗ ಸಂಗ್ರಹಿಸಿದ ಮಾಹಿತಿ ತಿಳಿಸುತ್ತದೆ. ಪತ್ರಿಕಾ ವರದಿಗಳು ಹಾಗೂ ಕೆಲ ರಾಜ್ಯ ಸರಕಾರಗಳು ಒದಗಿಸಿದ ಮಾಹಿತಿಯ ಆಧಾರದಲ್ಲಿ ಆಯೋಗ ಈ ವರದಿ ಸಿದ್ಧಪಡಿಸಿದೆ.

ಜನವರಿ 2017ರಿಂದೀಚೆಗೆ 123 ಮಂದಿ ಜಾಡಮಾಲಿಗಳು ಒಳಚರಂಡಿಯನ್ನು ಸ್ವಚ್ಛಗೊಳಿಸುವ ಸಂದರ್ಭ ಸಾವನ್ನಪ್ಪಿದ್ದಾರೆ. ಕಳೆದ ವಾರವೊಂದರಲ್ಲಿಯೇ ರಾಷ್ಟ್ರ ರಾಜಧಾನಿಯಲ್ಲಿ ಆರು ಕಾರ್ಮಿಕರು ಈ ರೀತಿ ಸಾವನ್ನಪ್ಪಿದ್ದಾರೆ. ಎಷ್ಟು ಕಾರ್ಮಿಕರನ್ನು ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕುಗಳ ಸ್ವಚ್ಛತೆಗೆ ಉಪಯೋಗಿಸಲಾಗುತ್ತಿದೆ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲವಾಗಿದೆ. ಶೌಚಾಲಯಗಳಲ್ಲಿನ ಮಲ ಹೊರುವ, ತೆರೆದ ಚರಂಡಿಗಳು ಹಾಗೂ ಗ್ರಾಮಗಳಲ್ಲಿರುವ ಶೌಚಾಲಯ ಗುಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರ ಬಗ್ಗೆಯಷ್ಟೇ ಈ ವರದಿಗಾಗಿ ಮಾಹಿತಿ ಸಂಗ್ರಹಿಸಲಾಗಿತ್ತು. ಆದರೆ ನಗರ ಪ್ರದೇಶದ ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಗಳು ಈ ವರದಿಯಲ್ಲಿಲ್ಲ.

ದೇಶದಲ್ಲಿ ಮಲ ಹೊರುವ ಪದ್ಧತಿಗೆ ನಿಷೇಧವಿದ್ದರೂ ಈ ಪದ್ಧತಿ ಇನ್ನೂ ಚಾಲ್ತಿಯಲ್ಲಿರುವುದು ಆಘಾತಕಾರಿ.

ದೇಶದ ಒಟ್ಟು 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಆಯೋಗದ ಮಾಹಿತಿಯಂತೆ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಸಾವುಗಳು ಸಂಭವಿಸಿವೆ.

ಜನವರಿ 2017ರಿಂದೀಚೆಗೆ ಸಂಭವಿಸಿದ 123 ಜಾಡಮಾಲಿಗಳ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇವಲ 70 ಪ್ರಕರಣಗಳಲ್ಲಿ ಮಾತ್ರ ನಿಗದಿತ ರೂ. 10 ಲಕ್ಷ ಪರಿಹಾರವನ್ನು ಸಾವಿಗೀಡಾದವರ ಕುಟುಂಬಗಳಿಗೆ ನೀಡಲಾಗಿದೆ ಎಂದು ಆಯೋಗದ ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News