ಈ ಜೈಲಿನಲ್ಲಿ ಕೈದಿಗಳು ತಮ್ಮ ಕುಟುಂಬದೊಂದಿಗೆ ವಾಸವಿರಬಹುದು, ದುಡಿಯಲು ಹೊರಗೂ ಹೋಗಬಹುದು....!

Update: 2018-09-18 11:15 GMT

 ಜೈಲು ಎಂದ ಕೂಡಲೇ ಎಲ್ಲರ ಮನಸ್ಸಿನಲ್ಲಿಯೂ ಮೂಡುವುದು ಕತ್ತಲು ತುಂಬಿರುವ,ಸೀಮಿತ ಸ್ಥಳಾವಕಾಶದ ಕಾಂಕ್ರಿಟ್ ಗೋಡೆಗಳ ಕೊಠಡಿ. ಇದು ಕೈದಿಗಳು ತಮ್ಮದೆಂದು ಹೇಳಿಕೊಳ್ಳಲಾಗದ,ತಮ್ಮ ಆಹಾರ ಅಥವಾ ತಮ್ಮಿಂದಿಗೆ ವಾಸವಿರುವವರ ಬಗ್ಗೆ ಯಾವುದೇ ಆಯ್ಕೆಯಿಲ್ಲದ ಸ್ಥಳವಾಗಿದೆ. ಆದರೆ ಭಾರತದಲ್ಲಿಯ ಒಂದು ಕಾರಾಗೃಹವು ಅಪರಾಧಿಗಳಿಗೆ ಜೈಲು ಶಿಕ್ಷೆಯ ಅರ್ಥವನ್ನೇ ಬದಲಿಸುತ್ತಿದೆ. ಇಲ್ಲಿ ಕೈದಿಗಳು ತಮ್ಮ ಕುಟುಂಬದೊಂದಿಗೆ ವಾಸವಾಗಬಹುದು ಮತ್ತು ಜೈಲಿನ ಹೊರಗೆ ತೆರಳಿ ದುಡಿಮೆಯನ್ನೂ ಮಾಡಬಹುದು.

ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ಜಿಲ್ಲಾ ಕಾರಾಗೃಹದ ಸಮೀಪ ದೇವಿ ಅಹಿಲ್ಯಾಬಾಯಿ ಓಪನ್ ಕಾಲನಿ ಎಂಬ ಹೆಸರಿನ ಈ ಜೈಲು ಇದೆ.

ಕೈದಿಗಳ ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವ ಉದ್ದೇಶದೊಂದಿಗೆ ಈ ಜೈಲನ್ನು ಸ್ಥಾಪಿಸಲಾಗಿದೆ. ಈ ಜೈಲಿನಲ್ಲಿ 10ಕ್ಕೂ ಅಧಿಕ ವಿವಾಹಿತ ಕೈದಿಗಳಿದ್ದು, ಅವರಿಗೆ ಇಲ್ಲಿ ಸ್ವತಂತ್ರ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಇಲ್ಲಿ ಕೈದಿಗಳ ಪಾಲಿಗೆ ಎರಡು ಕೋಣೆಗಳ ಮನೆಯೇ ಜೈಲಾಗಿದ್ದು,ಆತ/ಆಕೆ ತನ್ನ ಕುಟುಂಬದೊಂದಿಗೆ ಇಲ್ಲಿ ವಾಸವಿರಬಹುದು ಮತ್ತು ದುಡಿಯಲು ಜೈಲಿನ ಆವರಣದಿಂದ ಹೊರಕ್ಕೆ ತೆರಳಬಹುದು. ಸಹಜ ಜೀವನವನ್ನು ನಡೆಸಲು ಅವರಿಗೆ ಅವಕಾಶವನ್ನು ನೀಡಲಾಗುತ್ತಿದೆ ಮತ್ತು ಅವರು ಬೆಳಿಗ್ಗೆ ಎಂಟು ಗಂಟೆಯಿಂದ ಕೆಲಸಕ್ಕೆ ತೆರಳಬಹುದು. ಆದರೆ ಸಂಜೆ ಆರು ಗಂಟೆಯೊಳಗೆ ಜೈಲಿಗೆ ವಾಪಸಾಗುವುದು ಕಡ್ಡಾಯವಾಗಿದೆ.

ಅಂದ ಹಾಗೆ ಈ ಜೈಲಿನಲ್ಲಿ ಎಲ್ಲ ಕೈದಿಗಳಿಗೂ ಅವಕಾಶವಿಲ್ಲ. ಈ ಮುಕ್ತ ಜೈಲು ಜೀವಾವಧಿ ಶಿಕ್ಷೆಗೊಳಗಾಗಿರುವ,ಆದರೆ ಸನ್ನಡತೆಯನ್ನು ಪ್ರದರ್ಶಿಸಿರುವ ಮತ್ತು ಒಂದೆರಡು ವರ್ಷಗಳಲ್ಲಿ ಬಿಡುಗಡೆಗೊಳ್ಳಲಿರುವ ಕೈದಿಗಳಿಗೆ ಮಾತ್ರ ಮೀಸಲಾಗಿದೆ.

ಕೈದಿಗಳು ದುಡಿಯಲು ಮಾತ್ರ ಇಂದೋರ್ ನಗರಕ್ಕೆ ಹೋಗಬಹುದಾಗಿದೆ ಮತ್ತು ಅವರು ನಗರದ ಗಡಿಯನ್ನು ದಾಟುವಂತಿಲ್ಲ. ಇಲ್ಲಿಯ ಕಾವಲುಗಾರರು ಈ ಕೈದಿಗಳನ್ನು ಭೇಟಿಯಾಗಲು ಬರುವವರ ಎಲ್ಲ ವಿವರಗಳನ್ನೂ ದಾಖಲೆ ಪುಸ್ತಕದಲ್ಲಿ ಬರೆದಿಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News