ರಕ್ಷಣಾ ಸಚಿವೆ ರಫೇಲ್ ಒಪ್ಪಂದದ ವಾಸ್ತವಾಂಶಗಳನ್ನು ಮುಚ್ಚಿಡುತ್ತಿದ್ದಾರೆ: ಎ.ಕೆ.ಆ್ಯಂಟನಿ ಆರೋಪ

Update: 2018-09-18 14:07 GMT

ಹೊಸದಿಲ್ಲಿ,ಸೆ.18: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಫೇಲ್ ಒಪ್ಪಂದದ ವಾಸ್ತವಾಂಶಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಮಂಗಳವಾರ ಇಲ್ಲಿ ಆರೋಪಿಸಿದ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಅವರು,ಒಪ್ಪಂದದ ಕುರಿತು ತನಿಖೆಗಾಗಿ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲು ಸರಕಾರವು ಏಕೆ ಅಳುಕುತ್ತಿದೆ ಎಂದು ಪ್ರಶ್ನಿಸಿದರು.

ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದದಲ್ಲಿ ರಾಷ್ಟ್ರೀಯ ಭದ್ರತೆಯನ್ನು ರಾಜಿ ಮಾಡಿಕೊಂಡು ಸರಕಾರವು ತಪ್ಪೆಸಗಿದೆ ಎಂದೂ ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಆ್ಯಂಟನಿ,2013ರಲ್ಲಿ ಬೆಲೆ ಚೌಕಾಶಿ ಸಮಿತಿಯು ಒಪ್ಪಂದವನ್ನು ಅಂತಿಮಗೊಳಿಸುತ್ತಿದ್ದಾಗ ತನ್ನ ಹಸ್ತಕ್ಷೇಪವು ಅದನ್ನು ಸಂಪೂರ್ಣವಾಗಿ ವಿಫಲಗೊಳಿಸಿತ್ತು ಎಂಬ ಸೀತಾರಾಮನ್ ಆರೋಪವನ್ನು ‘ಸಂಪೂರ್ಣ ಸುಳ್ಳು’ ಎಂದು ತಿರಸ್ಕರಿಸಿದರು.

 ಸೀತಾರಾಮನ್ ಅವರು ಸರಕಾರಿ ಸ್ವಾಮ್ಯದ ಎಚ್‌ಎಎಲ್‌ನ ವರ್ಚಸ್ಸಿಗೆ ದೇಶಿಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳಂಕ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ರಕ್ಷಣಾ ಸಚಿವರೂ ಆಗಿರುವ ಆ್ಯಂಟನಿ ಆರೋಪಿಸಿದರು.

  ಎನ್‌ಡಿಎ ಸರಕಾರವು ಮಾಡಿಕೊಂಡಿರುವ ಒಪ್ಪಂದದಲ್ಲಿ ರಫೇಲ್ ವಿಮಾನಗಳ ಬೆಲೆ ಯುಪಿಎ ಸರಕಾರವು ನಿಗದಿಗೊಳಿಸಿದ್ದ ಬೆಲೆಗಿಂತ ಕಡಿಮೆಯಾಗಿದ್ದರೆ ಅದು 36 ವಿಮಾನಗಳ ಬದಲಿಗೆ ಅಗತ್ಯವಿರುವ 126 ವಿಮಾನಗಳನ್ನೇಕೆ ಖರೀದಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು,ಮೋದಿ ಸರಕಾರವು ಜನರ ಮನಸ್ಸಿನಲ್ಲ್ಲಿಯ ಶಂಕೆಗಳನ್ನು ನಿವಾರಿಸಲು ಯುಪಿಎ ಒಪ್ಪಂದದಲ್ಲಿನ 126 ವಿಮಾನಗಳ ದರಪಟ್ಟಿ ಮತ್ತು ಈಗಿನ 36 ವಿಮಾನಗಳ ದರಪಟ್ಟಿಯನ್ನು ಬಹಿರಂಗಗೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿದೆ. ಯಾರು ಸರಿ ಎನ್ನುವುದನ್ನು ದೇಶವೇ ನಿರ್ಧರಿಸಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News