ರೊಹಿಂಗ್ಯಾ ನಿರಾಶ್ರಿತರಿಗಾಗಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ ಭಾರತ

Update: 2018-09-18 13:33 GMT

ಢಾಕಾ,ಸೆ.18: ಬಾಂಗ್ಲಾದೇಶದ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿರುವ ರೊಹಿಂಗ್ಯಾ ಮುಸ್ಲಿಂ ನಿರಾಶ್ರಿತರಿಗಾಗಿ ಭಾರತವು ಒದಗಿಸಿರುವ 1.1 ಮಿಲಿಯ ಲೀಟರ್‌ಗೂ ಅಧಿಕ ಸೀಮೆಎಣ್ಣೆ ಮತ್ತು 20,000 ಸ್ಟವ್‌ಗಳನ್ನು ಮಂಗಳವಾರ ಇಲ್ಲಿಯ ಕಾಕ್ಸ್‌ಬಝಾರ್‌ನಲ್ಲಿ ಭಾರತೀಯ ರಾಯಭಾರಿ ಹರ್ಷವರ್ಧನ ಶ್ರಿಂಗ್ಲಾ ಅವರು ಬಾಂಗ್ಲಾದೇಶದ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವ ಮುಫಝ್ಝಿಲ್ ಹುಸೇನ್ ಚೌಧುರಿ ಅವರಿಗೆ ಹಸ್ತಾಂತರಿಸಿದರು.

ಇದು ಕಳೆದ ವರ್ಷ ಮ್ಯಾನ್ಮಾರ್‌ನಲ್ಲಿ ಸೇನಾ ದಾಳಿಯಿಂದ ಜೀವವುಳಿಸಿಕೊಂಡು ಪರಾರಿಯಾದ ಲಕ್ಷಾಂತರ ನಿರಾಶ್ರಿತರ ಮಾನವೀಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತವು ಬಾಂಗ್ಲಾದೇಶಕ್ಕೆ ಒದಗಿಸಿರುವ ಮೂರನೇ ಕಂತಿನ ನೆರವಾಗಿದೆ.

ತನ್ಮಧ್ಯೆ ರೊಹಿಂಗ್ಯಾ ನಿರಾಶ್ರಿತರ ಸಮಸ್ಯೆಯನ್ನು ಬಗೆಹರಿಸಲು ಹಸ್ತಕ್ಷೇಪ ಮಾಡುವಂತೆ ಮತ್ತು ಮ್ಯಾನ್ಮಾರ್‌ನ ಮೇಲೆ ಒತ್ತಡವನ್ನು ಹೇರುವಂತೆ ಬಾಂಗ್ಲಾದೇಶವು ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿಕೊಂಡಿದೆ.

ಭಾರತವು ಮಂಗಳವಾರ ಒದಗಿಸಿದ ಪರಿಹಾರ ಸಾಮಗ್ರಿಗಳನ್ನು ಬಳಿಕ ಕಾಕ್ಸ್ ಬಝಾರ್‌ನ ಕುಟುಪಲಾಂಗ್ ಶಿಬಿರದಲ್ಲಿಯ ನಿರಾಶ್ರಿತರಿಗೆ ವಿತರಿಸಲಾಯಿತು.

ಭಾರತವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆಪರೇಷನ್ ಇನ್ಸಾನಿಯತ್‌ನಡಿ ಮೊದಲ ಹಂತದ ನೆರವಾಗಿ 981 ಮೆ.ಟನ್ ಪರಿಹಾರ ಸಾಮಗ್ರಿಗಳನ್ನು ಬಾಂಗ್ಲಾದೇಶಕ್ಕೆ ರವಾನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News