ಲೈಂಗಿಕ ಪೀಡನೆ ದೂರು ಹಿಂಪಡೆಯಲು ನಿರಾಕರಣೆ: ಸಂತ್ರಸ್ತ ಯುವತಿಯ ತಂದೆಯನ್ನು ಥಳಿಸಿ ಹತ್ಯೆಗೈದ ದುಷ್ಕರ್ಮಿಗಳು

Update: 2018-09-18 13:35 GMT

ನಾಸಿಕ್, ಸೆ.18: ವ್ಯಕ್ತಿಯೊಬ್ಬ ತನಗೆ ಲೈಂಗಿಕ ಪೀಡನೆ ನೀಡಿರುವುದಾಗಿ ಯುವತಿ ನೀಡಿದ್ದ ದೂರನ್ನು ಹಿಂಪಡೆಯಲು ನಿರಾಕರಿಸಿದ್ದಕ್ಕಾಗಿ ಯುವತಿಯ ತಂದೆಯ ಮೇಲೆ ತಂಡವೊಂದು ದಾಳಿ ಮಾಡಿ ಅಮಾನುಷವಾಗಿ ಥಳಿಸಿದ್ದು ಬಳಿಕ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ.

 ನಾಸಿಕ್‌ನ ಮಾಲೆಗಾಂವ್‌ನ ಗೋಲ್ಡನ್ ನಗರ ಎಂಬಲ್ಲಿ 2015ರಲ್ಲಿ ಸೈಯದ್ ಸಯೀದ್ ಎಂಬಾತ ತನಗೆ ಲೈಂಗಿಕ ಪೀಡನೆ ನೀಡಿರುವುದಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಆರೋಪಿ ಸಯೀದ್ ದೂರು ಹಿಂಪಡೆಯುವಂತೆ ಯುವತಿಯ ತಂದೆ ಫಝಲ್ ಮುಹಮ್ಮದ್ ನವಾಬ್ ಆಲಿ (55 ವರ್ಷ) ಎಂಬವರ ಮೇಲೆ ಒತ್ತಡ ಹಾಕಿದ್ದು ಅವರು ನಿರಾಕರಿಸಿದ್ದರು. ಶನಿವಾರ ರಾತ್ರಿ ನವಾಬ್ ಅಲಿ ತನ್ನ ಬೈಕ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ ಅವರನ್ನು ತಡೆದಿದ್ದ ಗುಂಪೊಂದು ದೊಣ್ಣೆಗಳಿಂದ ತೀವ್ರವಾಗಿ ಥಳಿಸಿದೆ. ಗುಂಪಿನಲ್ಲಿ ಸಯೀದ್ ಸಹಿತ 7 ಮಂದಿ ಇದ್ದರು ಎಂದು ಡಿಎಸ್ಪಿ ರತ್ನಾಕರ್ ನವಲೆ ತಿಳಿಸಿದ್ದಾರೆ.

 ತೀವ್ರವಾಗಿ ಗಾಯಗೊಂಡಿದ್ದ ಆಲಿಯವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಸಯೀದ್ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಉಳಿದವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News