ಮುಖ್ಯ ಕಾರ್ಯದರ್ಶಿಯ ಮೇಲೆ ಹಲ್ಲೆ ಪ್ರಕರಣ: ಕೇಜ್ರಿವಾಲ್, ಸಿಸೋಡಿಯಾಗೆ ಸಮನ್ಸ್ ಜಾರಿ

Update: 2018-09-18 13:37 GMT

ಹೊಸದಿಲ್ಲಿ, ಸೆ.18: ಮುಖ್ಯ ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ನ್ಯಾಯಾಲಯವು ಆಮ್ ಆದ್ಮಿ ಪಕ್ಷ(ಆಪ್)ದ ಮುಖಂಡ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹಾಗೂ ಇತರ 11 ಶಾಸಕರಿಗೆ ಸಮನ್ಸ್ ಜಾರಿಗೊಳಿಸಿದ್ದು ಅಕ್ಟೋಬರ್ 25ರಂದು ನ್ಯಾಯಾಲಯದೆದುರು ಹಾಜರಾಗುವಂತೆ ಸೂಚಿಸಿದೆ.

ಕಳೆದ ಫೆಬ್ರವರಿ 19ರಂದು ರಾತ್ರಿ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ತನಗೆ ಸೂಚನೆ ಬಂದಿತ್ತು. ಅದರಂತೆ ಕೇಜ್ರೀವಾಲ್ ಮನೆಗೆ ತಾನು ತೆರಳಿದ್ದು ಅಲ್ಲಿ ತನಗೆ ಬೆದರಿಕೆಯೊಡ್ಡಲಾಗಿದ್ದು ಆಪ್ ಶಾಸಕರಾದ ಖಾನ್ ಮತ್ತು ಜರ್ವಾಲ್ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅನ್ಷು ಪ್ರಕಾಶ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಖಾನ್ ಮತ್ತು ಜರ್ವಾಲ್‌ರನ್ನು ಬಂಧಿಸಲಾಗಿತ್ತು. ಆದರೆ ಶಾಸಕರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂಬ ಮನವಿಯನ್ನು ನ್ಯಾಯಾಲಯ ನಿರಾಕರಿಸಿತ್ತು.

ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ 1,300 ಪುಟಗಳ ಆರೋಪಪಟ್ಟಿಯಲ್ಲಿ ಕೇಜ್ರೀವಾಲ್, ಸಿಸೋಡಿಯಾ ಹಾಗೂ ಇತರರು ದಿಲ್ಲಿಯ ಮುಖ್ಯ ಕಾರ್ಯದರ್ಶಿ ಅನ್ಷು ಪ್ರಕಾಶ್‌ಗೆ ಜೀವ ಬೆದರಿಕೆ ಒಡ್ಡಿದಲ್ಲದೆ, ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೆ ಅಕ್ರಮವಾಗಿ ಸಭೆ ಸೇರಿರುವುದು, ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು, ದುಷ್ಪ್ರೇರಣೆಯಿಂದ ಅಕ್ರಮವಾಗಿ ಕೂಡಿಹಾಕಿರುವ ಆರೋಪವನ್ನೂ ಹೊರಿಸಲಾಗಿದೆ. ಕೇಜ್ರೀವಾಲ್, ಸಿಸೋಡಿಯಾ, ಅಮಾನತುಲ್ಲಾ ಖಾನ್, ಪ್ರಕಾಶ್ ಜರ್ವಾಲ್, ನಿತಿನ್ ತ್ಯಾಗಿ, ರಿತುರಾಜ್ ಗೋವಿಂದ್, ಸಂಜೀವ ಝಾ, ಅಜಯ್ ದತ್, ರಾಜೇಶ್ ರಿಶಿ, ರಾಜೇಶ್ ಗುಪ್ತಾ, ಮದನ್‌ಲಾಲ್, ಪ್ರವೀಣ್ ಕುಮಾರ್ ಮತ್ತು ದಿನೇಶ್ ಮೊಹಾನಿಯಾ ಅವರು ಆರೋಪಿಗಳೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪ ಸಾಬೀತಾದರೆ ಕೇಜ್ರೀವಾಲ್ ಹಾಗೂ ಇತರ ಶಾಸಕರಿಗೆ ಗರಿಷ್ಟ 7 ವರ್ಷದ ಜೈಲುಶಿಕ್ಷೆಯಾಗಲಿದೆ. ಆದರೆ ಇದು ನಕಲಿ ಮತ್ತು ಸುಳ್ಳು ಆರೋಪವಾಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಡೆಸಿರುವ ಮಾಟಮಂತ್ರದ ಫಲವಾಗಿದೆ ಎಂದು ಆಪ್ ಪಕ್ಷ ಪ್ರತಿಕ್ರಿಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News