ಹಾರಾಟ ನಿಷೇಧ ನಿಯಮ ಉಲ್ಲಂಘನೆ: ಸಂಸದ ಜಯ್ ಪಾಂಡ ಹೆಲಿಕಾಪ್ಟರ್ ವಶಕ್ಕೆ

Update: 2018-09-18 13:39 GMT

ಭುವನೇಶ್ವರ, ಸೆ.18: ಹಾರಾಟ ನಿಷೇಧಿಸಲಾಗಿರುವ ಪರಿಸರ ಸೂಕ್ಷ್ಮ ವಲಯವಾದ ಚಿಲಿಕಾ ಸರೋವರದ ಮೇಲೆ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿದ ಆರೋಪದಡಿ ಬಿಜೆಡಿ ಉಚ್ಛಾಟಿತ ಮುಖಂಡ, ಸಂಸದ ಬೈಜಯಂತ್ ಜಯ್ ಪಾಂಡ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಅವರ ಹೆಲಿಕಾಪ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ.

 ತನ್ನ ವಿರುದ್ಧ ಮಾಡಿರುವ ಆರೋಪ ಮತ್ತು ಹೆಲಿಕಾಪ್ಟರ್ ವಶಕ್ಕೆ ಪಡೆದಿರುವುದು ತನ್ನ ಚಟುವಟಿಕೆಗಳಿಗೆ ತಡೆಯೊಡ್ಡಲು ನಡೆಸಿರುವ ನಾಚಿಕೆಗೇಡಿನ ಕ್ರಮವಾಗಿದೆ. ಆದರೆ ಇದು ವ್ಯರ್ಥ ಪ್ರಯತ್ನವಾಗಿದೆ ಎಂದು ಪಾಂಡ ಟೀಕಿಸಿದ್ದಾರೆ. ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಇತ್ತೀಚೆಗೆ ಬಿಜೆಡಿಯಿಂದ ಪಾಂಡರನ್ನು ಉಚ್ಛಾಟಿಸಲಾಗಿದೆ.

ತನ್ನ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಾರದ ಗ್ರಾಮದಲ್ಲಿ ನೀರಿನ ಕೊಳಕ್ಕೆ ಬಿದ್ದು ಮೃತಪಟ್ಟಿರುವ ಇಬ್ಬರು ಮಕ್ಕಳ ಕುಟುಂಬದವರಿಗೆ ಸಾಂತ್ವನ ಹೇಳಲೆಂದು ತಾನು ಪ್ರಯಾಣಿಸುತ್ತಿದ್ದೆ. ತನ್ನ ಪ್ರಯಾಣಕ್ಕೆ ತಡೆಯೊಡ್ಡಿದ ಬಳಿಕ ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ಮರಳಿದ್ದೇನೆ ಎಂದು ಪಾಂಡ ಟ್ವೀಟ್ ಮಾಡಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಪಾಂಡ ಚಿಲಿಕ ಸರೋವರದ ಬಳಿ ಹೆಲಿಕಾಪ್ಟರ್ ಇಳಿಸಿರುವುದಾಗಿ ನಮೂದಿಸಲಾಗಿದೆ. ಸೋಮವಾರ ಸಂಜೆ ಭುವನೇಶ್ವರ ವಿಮಾನನಿಲ್ದಾಣಕ್ಕೆ ತೆರಳಿದ ಪೊಲೀಸರ ತಂಡವು ಅಲ್ಲಿ ನಿಂತಿದ್ದ ಹೆಲಿಕಾಪ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಹೆಲಿಕಾಪ್ಟರ್‌ನ ಬ್ಲಾಕ್‌ಬಾಕ್ಸ್ ಅನ್ನು ಪರೀಕ್ಷಿಸಿ ಹೆಲಿಕಾಪ್ಟರ್‌ನ ಹಾರಾಟದ ವಿವರಗಳನ್ನು ಪರಿಶೀಲಿಸಿ ಹೆಲಿಕಾಪ್ಟರ್ ಚಿಲಿಕಾ ಸರೋವರದ ಬಳಿ ಇಳಿದಿದೆಯೇ ಎಂಬುದನ್ನು ಖಚಿತಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News