ರಫೇಲ್ ಒಪ್ಪಂದದಿಂದ ಎಚ್‌ಎಎಲ್‌ನ್ನು ಹೊರಗಿರಿಸಿದ್ದು ಯುಪಿಎ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ, ಸೆ.18: ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ರಫೇಲ್ ಒಪ್ಪಂದದಿಂದ ಎಚ್‌ಎಎಲ್ ಸಂಸ್ಥೆಯನ್ನು ಹೊರಗಿಡಲಾಗಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಎಚ್‌ಎಎಲ್ ಪ್ರತಿಷ್ಠೆಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾಜಿ ರಕ್ಷಣಾ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಎ.ಕೆ.ಆ್ಯಂಟನಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯುಪಿಎ ಸರಕಾರದ ಅವಧಿಯಲ್ಲಿ ರಫೇಲ್ ಒಪ್ಪಂದಕ್ಕೆ ಸಹಿ ಹಾಕಲಾಗಿಲ್ಲ. ಅಲ್ಲದೆ, ಎಚ್‌ಎಎಲ್ ಹಾಗೂ ದಸ್ಸಾಲ್ಟ್ ಏವಿಯೇಷನ್(ಯುದ್ಧವಿಮಾನ ನಿರ್ಮಿಸುವ ಫ್ರಾನ್ಸ್‌ನ ಸಂಸ್ಥೆ) ಮಧ್ಯೆಯೂ ಸಹಮತ ಮೂಡಿಲ್ಲ . ಆದ್ದರಿಂದ ಯಾವ ಸರಕಾರದ ಅವಧಿಯಲ್ಲಿ ಏನು ನಡೆದಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಯುಪಿಎ ಸರಕಾರದ ಅವಧಿಯಲ್ಲಿ ಮಾಡಿಕೊಳ್ಳಲಾದ ಒಪ್ಪಂದಕ್ಕಿಂತ ಶೇ.9ರಷ್ಟು ಕಡಿಮೆ ವೆಚ್ಚದಲ್ಲಿ ಈಗಿನ ಎನ್‌ಡಿಎ ಸರಕಾರ ರಫೇಲ್ ಯುದ್ಧವಿಮಾನದ ಒಪ್ಪಂದವನ್ನು ಇತ್ಯರ್ಥಗೊಳಿಸಿದೆ ಎಂದು ಪುನರುಚ್ಚರಿಸಿದ ಅವರು, ಎಷ್ಟು ಯುದ್ಧವಿಮಾನ ಖರೀದಿಸಬೇಕೆಂಬ ಬಗ್ಗೆ ನಿರ್ಧಾರವನ್ನು ಸಾಕಷ್ಟು ಎಚ್ಚರಿಕೆ ವಹಿಸಿ ಕೈಗೊಳ್ಳಲಾಗಿದೆ ಎಂದರು.