ಒಂದೇ ಛಾವಣಿಯಡಿ ಮುಹರ್ರಂ ಸವಾರಿ, ಗಣೇಶ ಮೂರ್ತಿ ಸ್ಥಾಪನೆ

Update: 2018-09-18 14:27 GMT

ಯವತಮಾಲ್,ಸೆ.18: ಈ ಹಿಂದೆ ಕೋಮು ಗಲಭೆಗೆ ಸಾಕ್ಷಿಯಾಗಿದ್ದ ಯವತಮಾಲ್ ಜಿಲ್ಲೆಯ ವಿದುಲ್ ಗ್ರಾಮವು ಒಂದೇ ಛಾವಣಿಯಡಿ ಮುಹರ್ರಂ ಸವಾರಿ ಮತ್ತು ಗಣೇಶ ವಿಗ್ರಹ ಸ್ಥಾಪಿಸುವ ಮೂಲಕ ಭ್ರಾತೃತ್ವಕ್ಕೆ ಉದಾಹರಣೆಯಾಗಿದೆ. ಒಂದೇ ಸ್ಥಳದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯಗಳು ನಿರಾತಂಕವಾಗಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿವೆ.

ಈ ಹಿಂದೆ ಗಣೇಶೋತ್ಸವ ಹಾಗೂ ರಮಝಾನ್ ಮತ್ತು ಮುಹರ್ರಂ ಸಂದರ್ಭಗಳಲ್ಲಿ ಈ ಪ್ರದೇಶವು ಹಲವಾರು ಕೋಮು ಉದ್ವಿಗ್ನತೆಯ ಘಟನೆಗಳಿಗೆ ಸಾಕ್ಷಿಯಾಗಿದ್ದ ಹಿನ್ನೆಲೆಯಲ್ಲಿ ಉಭಯ ಸಮುದಾಯಗಳನ್ನು ಬೆಸೆಯುವ ಯವತಮಾಲ್ ಎಸ್‌ಪಿ ಮೇಘನಾಥನ್ ರಾಜಕುಮಾರ ಅವರ ಈ ಉಪಕ್ರಮವು ಮಹತ್ವವನ್ನು ಪಡೆದುಕೊಂಡಿದೆ.

 ಈ ವರ್ಷ ಗಣೇಶೋತ್ಸವ ಮತ್ತು ಮುಹರ್ರಂ ಏಕಕಾಲದಲ್ಲಿ ಬಂದಿರುವುದರಿಂದ ಎಸ್‌ಪಿಯವರ ಸೂಚನೆಯಂತೆ ಸೆ.8ರಂದು ಶಾಂತಿಸಭೆಯನ್ನು ಕರೆದಿದ್ದ ಉಮರಖೇಡ್ ಪೊಲೀಸ್ ಠಾಣಾಧಿಕಾರಿ ಹನುಮಂತ ಗಾಯಕ್ವಾಡ್ ಅವರು ಎರಡೂ ಉತ್ಸವಗಳನ್ನು ಜೊತೆಯಾಗಿ ಆಚರಿಸುವ ಬಗ್ಗೆ ಚಿಂತನೆ ನಡೆಸಬೇಕೆಂಬ ಪ್ರಸ್ತಾವನೆಯನ್ನು ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಾಯಕರ ಮುಂದಿರಿಸಿದ್ದರು.

ಈ ಸಲಹೆಯನ್ನು ಸರ್ವಾನುಮತದಿಂದ ಒಪ್ಪಿಕೊಂಡ ಗ್ರಾಮಸ್ಥರು ವಿದುಲ್‌ನ ನಳ್‌ಸಾಹೇಬ ದೇವಸ್ಥಾನದ ಆವಾರದಲ್ಲಿ ಮಂಟಪವನ್ನು ನಿರ್ಮಿಸಿದ್ದು,ಇಲ್ಲಿ ಎರಡೂ ಧಾರ್ಮಿಕ ಉತ್ಸವಗಳನ್ನು ಆಚರಿಸಲಾಗುತ್ತಿದೆ.

 ಕಳೆದ 134 ವರ್ಷಗಳಿಂದಲೂ ದೇವಸ್ಥಾನದ ಆವರಣದಲ್ಲಿ ಗಣೇಶೋತ್ಸವ ನಡೆಯುತ್ತಿದೆ. ಕೆಲವು ವರ್ಷಗಳಲ್ಲಿ ಗಣೇಶೋತ್ಸವ ಮತ್ತು ಮುಹರ್ರಂ ಒಂದೇ ಸಮಯದಲ್ಲಿ ಬರುತ್ತವೆ. ಇಂತಹ ಸಂದರ್ಭಗಳಲ್ಲಿ ಜೊತೆಯಾಗಿ ಈ ಉತ್ಸವಗಳನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲು ನಾವೀಗ ನಿರ್ಧರಿಸಿದ್ದೇವೆ ಎಂದು ದೇವಸ್ತಾನ ಮಂಡಳಿಯ ಅಧ್ಯಕ್ಷ ಜಯರಾಮ ಧಾಗೆ ತಿಳಿಸಿದರು.

ಪೊಲೀಸರು ಉಭಯ ಸಮುದಾಯಗಳ ಮಧ್ಯೆ ಯಾವುದೇ ಸಂಘರ್ಷಕ್ಕೆಡೆಯಾಗದಂತೆ ಗಣೇಶ ವಿಸರ್ಜನೆ ಮತ್ತು ಮುಹರ್ರಂ ಸವಾರಿ ಮೆರವಣಿಗೆಗಳಿಗೆ ಪ್ರತ್ಯೇಕ ವೇಳಾಪಟ್ಟಿಯನ್ನೂ ನಿಗದಿಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News