ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಮನವಿ ತಿದ್ದುಪಡಿಗೆ ಅನುಮತಿ

Update: 2018-09-18 14:31 GMT

ಹೊಸದಿಲ್ಲಿ, ಸೆ. 18: ದೂರನ್ನು ತಿದ್ದುಪಡಿ ಮಾಡಲು ಹಾಗೂ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅನುಮತಿ ನೀಡುವಂತೆ ರಾಜೀವ್ ಗಾಂಧಿ ಹತ್ಯೆಯ ಪ್ರಕರಣದ ಸಂತ್ರಸ್ತರ ಕುಟಂಬ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದೆ.

2014 ಮಾರ್ಚ್‌ನಲ್ಲಿ ದಾಖಲಿಸಿದ ತಮ್ಮ ದೂರನ್ನು ತಿದ್ದುಪಡಿ ಮಾಡುವಂತೆ ಸಂತ್ರಸ್ತರ ಕುಟುಂಬಕ್ಕೆ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಹೇಳಿದೆ. ಅಪರಾಧಿಗಳ ಬಿಡುಗಡೆ ಮಾಡುವಂತೆ ತಮಿಳುನಾಡು ಸರಕಾರ ಇತ್ತೀಚೆಗೆ ಕೈಗೊಂಡ ನಿರ್ಧಾರ ಹಾಗೂ ಅದಕ್ಕೆ ರಾಜ್ಯಪಾಲರು ನೀಡಿದ ಶಿಫಾರಸಿನ ದಾಖಲೆಯನ್ನು ಸಲ್ಲಿಸುವಂತೆ ಹೇಳಿರುವ ಪೀಠ, ವಿಚಾರಣೆಯನ್ನು ನಾಲ್ಕು ವಾರಗಳ ನಂತರ ನಡೆಸಲಾಗುವುದು ಎಂದು ಹೇಳಿದೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ. ರಾಜ್ಯ ಸರಕಾರದ ಈ ನಡೆ ಸಂವಿಧಾನದ ವೌಲ್ಯ, ರಾಷ್ಟ್ರ ಭಕ್ತಿ ಹಾಗೂ ಪಾರದರ್ಶಕ ರಾಜಕೀಯಕ್ಕೆ ವಿರುದ್ಧವಾಗಿದೆ ಎಂದು ಸಂತ್ರಸ್ತರ ಕುಟುಂಬದ ಮನವಿಯಲ್ಲಿ ಹೇಳಿದೆ. ‘‘ಹತ್ಯೆ ಅಪರಾಧಿಗಳನ್ನು ಬಿಡುಗಡೆ ಮಾಡುವುದರಿಂದ ಸಂತ್ರಸ್ತರ ಕುಟುಂಬ, ಸಮಾಜದ ಮೇಲಾಗುವ ಪರಿಣಾಮವನ್ನು ರಾಜ್ಯ ಸರಕಾರ ಮನಗಾಣಬೇಕು.’’ ಎಂದು ಮನವಿಯಲ್ಲಿ ಹೇಳಲಾಗಿದೆ.

 ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 7 ಮಂದಿ ಅಪರಾಧಿಗಳ ಬಿಡುಗಡೆಗೆ ಕೇಂದ್ರದ ಶಿಫಾರಸು ಕೋರಲು ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಶನಿವಾರ ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News