ಗುಜರಾತ್‌ನಲ್ಲಿ ರೈತರ ಪರ ರ‌್ಯಾಲಿ: ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವಶಕ್ಕೆ

Update: 2018-09-18 14:38 GMT

ಗಾಂಧಿನಗರ, ಸೆ. 18: ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಮಂಗಳವಾರ ವಿಧಾನ ಸಭೆ ಸಂಕೀರ್ಣದತ್ತ ರ‌್ಯಾಲಿ ನಡೆಸಲು ಪ್ರಯತ್ನಿಸಿದ ಸುಮಾರು 300 ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

 ಕೃಷಿ ಸಾಲ ಮನ್ನಾ ಮಾಡುವಂತೆ ಬಿಜೆಪಿ ಸರಕಾರದ ಮೇಲೆ ಒತ್ತಡ ಹೇರಲು ಗುಜರಾತ್ ಕಾಂಗ್ರೆಸ್ ಸತ್ಯಾಗ್ರಹ ಛಾವ್ನಿಯಲ್ಲಿ ರೈತರು ಹಾಗೂ ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಿತ್ತು. ಆದಾಗ್ಯೂ, ಇಲ್ಲಿನ ಸತ್ಯಾಗ್ರ ಛಾವ್ನಿಯಲ್ಲಿರುವ ವಿಧಾನಸಭೆ ಸಂಕೀರ್ಣದತ್ತ ರ‌್ಯಾಲಿ ನಡೆಸಲು ಆರಂಭಿಸಿದ ಕೂಡಲೇ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯ ಘಟಕದ ವರಿಷ್ಠ ಅಮಿತ್ ಚಾವ್ಡಾ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಾಜೀವ್ ಸಾತವ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ವಿಧಾನ ಸಭೆ ಸಂಕೀರ್ಣಕ್ಕೆ ತಲುಪಲು ಯತ್ನಿಸುತ್ತಿರುವಾಗ ಸುಮಾರು 300 ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು ಹಾಗೂ ಅನಂತರ ಬಿಡುಗಡೆ ಮಾಡಿದರು ಎಂದು ಗಾಂಧಿನಗರ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ. ರ‌್ಯಾಲಿ ನಡೆಸಲು ಕಾಂಗ್ರೆಸ್‌ಗೆ ಅನುಮತಿ ನೀಡಿರಲಿಲ್ಲ. ಸತ್ಯಾಗ್ರಹ ಛಾವ್ನಿಯಲ್ಲಿ ಸಭೆ ಸೇರಲು ಮಾತ್ರ ಅನುಮತಿ ನೀಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ರ್ಯಾಲಿ ಶಾಂತಿಯುತವಾಗಿ ನಡೆದಿದೆ. ಆದರೆ, ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವ ಸಂದರ್ಭ ಕಲ್ಲೆಸೆತದ ಘಟನೆಯೊಂದರಲ್ಲಿ ಓರ್ವ ಕಾನ್ಸ್‌ಟೆಬಲ್ ಗಾಯಗೊಂಡಿದ್ದಾರೆ ಎಂದು ಉಸ್ತುವಾರಿ ಪೊಲೀಸ್ ಅಧೀಕ್ಷಕ ಕೆ.ಎಫ್. ಬಾಡೋಲಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News