ದೇಶದ ಮೊದಲ ಮಹಿಳಾ ಐಎಎಸ್ ಅಧಿಕಾರಿ ನಿಧನ

Update: 2018-09-18 14:40 GMT

ಮುಂಬೈ, ಸೆ. 18: ಸ್ವಾತಂತ್ರೋತ್ತರ ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನಾ ರಾಜಮ್ ಮಲ್ಹೋತ್ರಾ ಇಲ್ಲಿನ ಅಂಧೇರಿ ಉಪನಗರದಲ್ಲಿರುವ ತನ್ನ ನಿವಾಸದಲ್ಲಿ ಸೋಮವಾರ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆಯನ್ನು ಇಲ್ಲಿನ ಸ್ಮಶಾನದಲ್ಲಿ ನಡೆಸಲಾಯಿತು.

 ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ 1927 ಜುಲೈಯಲ್ಲಿ ಆನ್ನಾ ರಾಜಮ್ ಜಾರ್ಜ್ ಜನಿಸಿದರು. ಕೋಝಿಕೋಡ್‌ನಲ್ಲಿ ಶಾಲಾ ಶಿಕ್ಷಣ ಪಡೆದ ಬಳಿಕ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಅವರು ಮದ್ರಾಸ್‌ಗೆ ತೆರಳಿದ್ದರು. 1951ರಲ್ಲಿ ಅವರು ನಾಗರಿಕ ಸೇವೆಗೆ ಸೇರಿದ್ದರು. ಮದ್ರಾಸ್ ರಾಜ್ಯದಲ್ಲಿ ಮುಖ್ಯಮಂತ್ರಿ ಸಿ. ರಾಜಗೋಪಾಲಾಚಾರಿ ಅವರ ಕೈಕೆಳಗೆ ಅವರು ಕಾರ್ಯ ನಿರ್ವಹಿಸಿದ್ದರು. 1985-1990ರ ವರೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದ ಆರ್.ಎನ್. ಮಲ್ಹೋತ್ರಾ ಅವರನ್ನು ಅನ್ನಾ ರಾಜಮ್ ವಿವಾಹವಾಗಿದ್ದರು. ಮುಂಬೈ ಸಮೀಪ ದೇಶದ ಆಧುನಿಕ ಬಂದರು ಜವಾಹರ್ ಲಾಲ್ ಪೋರ್ಟ್ ಟ್ರಸ್ಟ್ ಸ್ಥಾಪಿಸುವ ಮೂಲಕ ಅವರು ದೇಶಕ್ಕೆ ಕೊಡುಗೆ ನೀಡಿದ್ದಾರೆ. 1989ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News