ಗೋವಾ ಕಾಂಗ್ರೆಸ್ ಶಾಸಕರಿಂದ ರಾಜ್ಯಪಾಲರ ಭೇಟಿ: ಸರಕಾರ ರಚನೆಗೆ ಹಕ್ಕು ಮಂಡನೆ

Update: 2018-09-18 14:53 GMT

ಪಣಜಿ,ಸೆ.18: ಗೋವಾ ವಿಧಾನಸಭೆಯ ಎಲ್ಲ 16 ಕಾಂಗ್ರೆಸ್ ಶಾಸಕರು ಮಂಗಳವಾರ ಸಂಜೆ ತಮ್ಮ ನಾಯಕ ಚಂದ್ರಕಾಂತ ಕವಳೇಕರ್ ಅವರ ನೇತೃತ್ವದಲ್ಲಿ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಮನೋಹರ ಪಾರಿಕ್ಕರ್ ನೇತೃತ್ವದ ಸರಕಾರವನ್ನು ವಜಾಗೊಳಿಸುವಂತೆ ಮತ್ತು ನೂತನ ಸರಕಾರವನ್ನು ರಚಿಸುವಂತೆ ಏಕೈಕ ದೊಡ್ಡಪಕ್ಷವಾಗಿರುವ ಕಾಂಗ್ರೆಸ್‌ನ್ನು ಆಹ್ವಾನಿಸುವಂತೆ ಆಗ್ರಹಿಸಿದರು.

ನಾವು ಸದನದಲ್ಲಿ ನಮ್ಮ ಬಹುಮತವನ್ನು ಸಾಬೀತುಗೊಳಿಸುತ್ತೇವೆ ಎಂದು ಭೇಟಿಯ ಬಳಿಕ ಕಾಂಗ್ರೆಸ್ ನಾಯಕ ಹಾಗು ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಝಿನೊ ಫೆಲಿರೋ ಅವರು ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯಮಂತ್ರಿ ಪಾರಿಕ್ಕರ್ ಅವರು ಅನಾರೋಗ್ಯದಿಂದಾಗಿ ದಿಲ್ಲಿಯ ಏಮ್ಸ್‌ಗೆ ದಾಖಲಾಗಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ.

40 ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ 16 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ನಿಯೋಗವೊಂದು ಸೋಮವಾರ ರಾಜಭವನಕ್ಕೆ ತೆರಳಿ ವಿಧಾನಸಭೆಯನ್ನು ವಿಸರ್ಜಿಸದಂತೆ ಮತ್ತು ಬದಲಿಗೆ ಪರ್ಯಾಯ ಸರಕಾರ ರಚನೆಗೆ ತನ್ನನ್ನು ಆಹ್ವಾನಿಸುವಂತೆ ಆಗ್ರಹಿಸಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅಹವಾಲೊಂದನ್ನು ಸಲ್ಲಿಸಿತ್ತು.

ಸಿನ್ಹಾ ಅವರು ಮಂಗಳವಾರ ಅಪರಾಹ್ನ ರಾಜ್ಯಕ್ಕೆ ವಾಪಸಾದ ಬಳಿಕ ಸಂಜೆ 6:30ಕ್ಕೆ ತನ್ನನ್ನು ಭೇಟಿಯಾಗುವಂತೆ ಕಾಂಗ್ರೆಸ್ ಶಾಸಕರಿಗೆ ಸೂಚಿಸಿದ್ದರು.

ಕಾಂಗ್ರೆಸ್ ಪಕ್ಷವು ಇತರ ಪಕ್ಷಗಳ ಶಾಸಕರ ಬೆಂಬಲವನ್ನು ಹೊಂದಿದೆ ಮತ್ತು ರಾಜ್ಯಪಾಲರು ಅವಕಾಶ ನೀಡಿದರೆ ಸರಕಾರವನ್ನು ರಚಿಸಲಿದೆ ಎಂದು ಕವಳೇಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News