ಏಶ್ಯಕಪ್: ಹಾಂಕಾಂಗ್ ವಿರುದ್ಧ ಭಾರತ 285/7

Update: 2018-09-18 15:27 GMT

ದುಬೈ, ಸೆ.18: ಆರಂಭಿಕ ಆಟಗಾರ ಶಿಖರ್ ಧವನ್ ಶತಕ ಹಾಗೂ ಅಂಬಟಿ ರಾಯುಡು ಅರ್ಧಶತಕದ ಬೆಂಬಲದಿಂದ ಭಾರತ ತಂಡ ಹಾಂಕಾಂಗ್ ವಿರುದ್ಧ ಮಂಗಳವಾರ ಇಲ್ಲಿ ನಡೆದ ಏಶ್ಯಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 285 ರನ್ ಗಳಿಸಿದೆ.

  ಟಾಸ್ ಜಯಿಸಿದ ಹಾಂಕಾಂಗ್ ನಾಯಕ ಅಂಶುಮಾನ್ ರಾತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಏಶ್ಯಕಪ್ ತನ್ನ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಪರ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಇನಿಂಗ್ಸ್ ಆರಂಭಿಸಿದರು. ಈ ಇಬ್ಬರು ಮೊದಲ ವಿಕೆಟ್‌ಗೆ 45 ರನ್ ಜೊತೆಯಾಟ ನಡೆಸಿದರು.

ಶರ್ಮಾ ಇನಿಂಗ್ಸ್‌ನ 8ನೇ ಓವರ್‌ನಲ್ಲಿ 23 ರನ್‌ಗೆ ಎಹ್ಸಾನ್ ಖಾನ್‌ಗೆ ಔಟಾದರು. ಆಗ ಕ್ರೀಸಿಗಿಳಿದ ಅಂಬಟಿ ರಾಯುಡು(60 ರನ್, 70 ಎಸೆತ, 3 ಬೌಂಡರಿ, 2 ಸಿಕ್ಸರ್) ಅವರೊಂದಿಗೆ 2ನೇ ವಿಕೆಟ್‌ಗೆ 116 ರನ್ ಜೊತೆಯಾಟ ನಡೆಸಿದ ಧವನ್ ತಂಡವನ್ನು ಆಧರಿಸಿದರು.

ದೀರ್ಘ ಸಮಯದ ಬಳಿಕ ತಂಡಕ್ಕೆ ವಾಪಸಾದ ರಾಯುಡು 70 ಎಸೆತಗಳಲ್ಲಿ 60 ರನ್ ಗಳಿಸಿ ಔಟಾದರು. ಧವನ್ ಹಾಗೂ ದಿನೇಶ್ ಕಾರ್ತಿಕ್ 3ನೇ ವಿಕೆಟ್‌ಗೆ 79 ರನ್ ಸೇರಿಸಿ 40ನೇ ಓವರ್ ಅಂತ್ಯಕ್ಕೆ ಭಾರತದ ಸ್ಕೋರನ್ನು 240ರ ಗಡಿ ತಲುಪಿದರು. 120 ಎಸೆತಗಳಲ್ಲಿ 15 ಬೌಂಡರಿ, 2 ಸಿಕ್ಸರ್‌ಗಳ ಸಹಿತ 127 ರನ್ ಗಳಿಸಿದ ಧವನ್ ಅವರು ದೇವಾಂಗ್ ಶಾಗೆ ವಿಕೆಟ್ ಒಪ್ಪಿಸಿದರು.

ವಿಕೆಟ್‌ಕೀಪರ್ ದಾಂಡಿಗ ಎಂ.ಎಸ್. ಧೋನಿ ಖಾತೆ ತೆರೆಯಲು ವಿಫಲವಾಗಿ ಎಹ್ಸಾನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. 28 ರನ್ ಗಳಿಸಿ ಔಟಾಗದೆ ಉಳಿದ ಕೇದಾರ್ ಜಾಧವ್‌ಗೆ ಕೆಳ ಕ್ರಮಾಂಕದ ದಾಂಡಿಗರು ಸಾಥ್ ನೀಡಲಿಲ್ಲ. ಹಾಂಕಾಂಗ್ ಪರ ದೇವಾಂಗ್ ಶಾ(39ಕ್ಕೆ3) ಯಶಸ್ವಿ ಬೌಲರ್ ಎನಿಸಿಕೊಂಡರು. ಎಹ್ಸಾನ್ ಖಾನ್(65ಕ್ಕೆ2) ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News