ಪೆರಿಯಾರ್ ಪ್ರತಿಮೆ ಮೇಲೆ ಶೂ ಎಸೆದ ವಕೀಲ ಬಿಜೆಪಿಗೆ ಸೇರಿದವ: ಪೊಲೀಸ್

Update: 2018-09-18 16:11 GMT

ಚೆನ್ನೈ, ಸೆ. 18: ದ್ರಾವಿಡ ಚಳವಳಿಯ ನಾಯಕ ಎ.ವಿ ರಾಮಸ್ವಾಮಿ ಪೆರಿಯಾರ್ ಅವರ 140ನೇ ಜನ್ಮ ದಿನಾಚರಣೆಯಂದು ಚೆನ್ನೈಯಲ್ಲಿರುವ ಪ್ರತಿಮೆ ಮೇಲೆ ಶೂ ಎಸೆದ ಆರೋಪದಲ್ಲಿ ವಕೀಲನೋರ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ರಿಪುರ ಜಿಲ್ಲೆಯ ಧಾರಾಪುರಂನಲ್ಲಿ ಪೆರಿಯಾರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ಶೋಧ ಕಾರ್ಯದಲ್ಲಿ ನಾವು ತೊಡಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ವಕೀಲ ಡಿ. ಜಗದೀಶನ್ ಎಂದು ಗುರುತಿಸಲಾಗಿದೆ. ಅವರು ಬಿಜೆಪಿಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಜಗದೀಶನ್ ಪಕ್ಷದ ಯಾವುದೇ ಹುದ್ದೆಯನ್ನು ಹೊಂದಿಲ್ಲ. ‘‘ಯಾರು ಬೇಕಾದರೂ ಬಿಜೆಪಿ ಸದಸ್ಯ ಎಂದು ಹೇಳಬಹುದು. ಕೇವಲ ಮಿಸ್ಡ್ ಕಾಲ್ ಮೂಲಕ ಯಾರು ಕೂಡ ಬಿಜೆಪಿಯ ಸದಸ್ಯನಾಗಬಹುದು.’’ ಎಂದು ಪಕ್ಷದ ರಾಜ್ಯ ವಕ್ತಾರ ಎ.ಎನ್.ಎಸ್. ಪ್ರಸಾದ್ ತಿಳಿಸಿದ್ದಾರೆ. ಜನ್ಮ ದಿನಾಚರಣೆ ಆಚರಿಸಲು ವಿಸಿಕೆ ಕಾರ್ಯಕರ್ತರು ಅಣ್ಣಾ ಸಾಲೈಯಲ್ಲಿ ಸೇರಿದ ಸಂದರ್ಭ ಜಗದೀಶನ್ ಪೆರಿಯಾರ್ ಪ್ರತಿಮೆ ಮೇಲೆ ಶೂ ಎಸೆದಿದ್ದರು. ಕೂಡಲೇ ವಿಸಿಕೆ ಕಾರ್ಯಕರ್ತರು ಪಕ್ಷದ ವರಿಷ್ಠ ತೋಲ್ ತಿರುಮಾವಲವನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News