ಉನ್ನತ ಶಿಕ್ಷಣ ಸಚಿವರ ಮಾದರಿಯನ್ನು ಜಲಸಂಪನ್ಮೂಲ ಸಚಿವರು ಅನುಸರಿಸಲಿ

Update: 2018-09-18 18:32 GMT

ಹೊರಗುತ್ತಿಗೆ ಟೆಂಡರು ರದ್ದುಪಡಿಸಬೇಕೆಂದು ಮತ್ತು ತಮ್ಮನ್ನು ಆ ಹಿಂದಿನಂತೆ ವಿಶ್ವವಿದ್ಯಾನಿಲಯದ ನೌಕರರೆಂದೇ ಪರಿಗಣಿಸಿ ಮುಂದುವರಿಸಬೇಕೆಂಬ ಪ್ರಧಾನ ಬೇಡಿಕೆಯೊಂದಿಗೆ ಎಐಯುಟಿಯುಸಿ ನೇತೃತ್ವದಲ್ಲಿ ಈ ತಿಂಗಳಿನ ಆರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ‘ಡಿ’ ಗ್ರೂಪ್ ಕಾರ್ಮಿಕರು ವಿ.ವಿ.ಯ ಕುವೆಂಪು ದ್ವಾರದ ಬಳಿ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ನಿರತರಾಗಿದ್ದರು. ಮೈಸೂರಿನ ಬಹುತೇಕ ಎಲ್ಲಾ ಪ್ರಜಾತಾಂತ್ರಿಕ ವ್ಯಕ್ತಿ/ಶಕ್ತಿಗಳಿಂದ ಬೆಂಬಲಿಸಲ್ಪಟ್ಟ ಈ ಕಾರ್ಮಿಕರ ನ್ಯಾಯಬದ್ಧ ಹೋರಾಟವು, ಅಂತಿಮವಾಗಿ-ಅವರ ಪ್ರಧಾನ ಬೇಡಿಕೆಯಾದ-ಹೊರಗುತ್ತಿಗೆ ಟೆಂಡರು ರದ್ದುಪಡಿಸುವುದಾಗಿ ಘೋಷಿಸಿದ ಸಚಿವ ಜಿ.ಟಿ. ದೇವೇಗೌಡರ ವಿವೇಕಯುತ ಕ್ರಮದ ಮೂಲಕ (ಸೆಪ್ಟಂಬರ್ 10 ರಂದು) ವಿಜಯದೊಂದಿಗೆ ಅಂತ್ಯಗೊಂಡಿತು. ಉನ್ನತ ಶಿಕ್ಷಣ ಸಚಿವರ ಈ ಕ್ರಮವು ಮುಷ್ಕರನಿರತ ವಿ.ವಿ. ಸಿಬ್ಬಂದಿಯಲ್ಲಿ ಅನ್ಯಾಯದ ವಿರುದ್ಧ ಭರವಸೆ ಮೂಡಿಸಿದಂತೆಯೇ ಈ ಹೋರಾಟವನ್ನು ಬೆಂಬಲಿಸುತ್ತಿದ್ದ ಎಲ್ಲಾ ಪ್ರಜ್ಞಾವಂತರ ಪ್ರಶಂಸೆಗೂ ಪಾತ್ರವಾಯಿತು. ಜಿಟಿಡಿಯವರ ಈ ಕ್ರಮವು ಬಡ ಕಾರ್ಮಿಕರ ವಿಷಯದಲ್ಲಿ ಸರಕಾರ/ಸಚಿವರಾದವರು ಹೇಗೆ ಸ್ಪಂದಿಸಬೇಕು ಎಂಬುದಕ್ಕೆ ಒಂದು ರೀತಿಯ ಮಾದರಿ. ಈ ವಿಷಯವನ್ನು ಇಷ್ಟೊಂದು ವಿಶದವಾಗಿ ವಿವರಿಸುತ್ತಿರುವುದಕ್ಕೆ ಕಾರಣವಿಲ್ಲದಿಲ್ಲ.

ಹೊರಗುತ್ತಿಗೆ ಪದ್ಧತಿಯನ್ನು ವಿರೋಧಿಸಿ ರಾಜ್ಯಾದ್ಯಂತ ಬಹುತೇಕ ಎಲ್ಲಾ ಇಲಾಖೆಗಳ ದಿನಗೂಲಿ/ಸಾಂದರ್ಭಿಕ ನೌಕರರು ಒಂದಿಲ್ಲೊಂದು ರೀತಿಯಲ್ಲಿ ಪ್ರತಿಭಟಿಸುತ್ತಲಿರುವುದು ಸರ್ವವಿಧಿತ. ಆದರೆ ಎಲ್ಲ ಸೂಕ್ಷ್ಮತೆಗಳನ್ನೂ ಕಳೆದುಕೊಂಡಿರುವ ಸರಕಾರಿ ಅಧಿಕಾರಿಗಳು ಮತ್ತು ಶಾಸಕ-ಮಂತ್ರಿಗಳಂತಹ ಜನಪ್ರತಿನಿಧಿಗಳು ಈ ಬಗ್ಗೆ ಎಷ್ಟು ನಿರ್ಲಕ್ಷ್ಯದಿಂದಿದ್ದಾರೆಂದರೆ, ಬಹುಶಃ ಅದನ್ನು ಮಾತುಗಳಲ್ಲಿ ಖಂಡಿಸಲು ಸಾಧ್ಯವಾಗಲಾರದು. ಹೀಗಾಗಿ ಬಹುತೇಕ ಕಡೆ ಕಾರ್ಮಿಕರ ಈ ಕುರಿತ ಹೋರಾಟಗಳು ವಸ್ತುಶಃ ಅರಣ್ಯರೋದನಗಳಾಗಿವೆ.

ಉದಾಹರಣೆಗೆ, ರಾಜ್ಯದ ಹೆಮ್ಮೆಯ ನೀರಾವರಿ ಯೋಜನೆಗಳಲ್ಲೊಂದಾಗಿರುವ ತುಂಗಭದ್ರಾ ಯೋಜನೆಯ ಹಂಗಾಮಿ ನೌಕರರ ಅನಿರ್ದಿಷ್ಟ ಮುಷ್ಕರ. ಈ ಕಾರ್ಮಿಕರ ಮುಷ್ಕರವು ಈಗಾಗಲೇ ಧರಣಿ, ರಸ್ತೆ ತಡೆ, ಪಂಜಿನ ಮೆರವಣಿಗೆ, ಸ್ವಾತಂತ್ರ್ಯ ದಿನದ ಕರಾಳ ದಿನಾಚರಣೆ, ನೂರಾ ಐವತ್ತು ಕಿ.ಮೀ.ಗಳ ಕಾಲ್ನಡಿಗೆ ಜಾಥಾ, ಹೀಗೆ ಹಲವಾರು ರೂಪಗಳೊಂದಿಗೆ ಎಪ್ಪತ್ತು ದಿನಗಳನ್ನು ಪೂರೈಸಿದೆ. ಆದರೆ ಯಾರೂ ಈ ಬಡ ಕಾರ್ಮಿಕರ ಬೇಡಿಕೆಗಳ ನ್ಯಾಯಬದ್ಧತೆಯನ್ನು ಪ್ರಾಮಾಣಿಕ ಮನಸ್ಸಿನೊಂದಿಗೆ ಪರಿಶೀಲಿಸುತ್ತಿಲ್ಲ! ಉನ್ನತ ಶಿಕ್ಷಣ ಸಚಿವ ಜಿಟಿಡಿಯವರಂತೆ ಅವರ ಸಂಪುಟ ಸಹೋದ್ಯೋಗಿಯೇ ಆಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ರವರು ಈ ಬಗ್ಗೆ ಖುದ್ದು ಗಮನ ಹರಿಸಿ-ತಮ್ಮ ಇಲಾಖೆಯ ಈ ಬಡ ಕಾರ್ಮಿಕರ ಮೇಲೆ ತೂಗುಗತ್ತಿಯಂತೆ ನೇತುಬಿದ್ದಿರುವ- ಹೊರಗುತ್ತಿಗೆ ಟೆಂಡರನ್ನು ರದ್ದುಪಡಿಸುವ ಮೂಲಕ ಮತ್ತೊಂದು ಮಾದರಿಯನ್ನು ಏಕೆ ನಿರ್ಮಿಸಬಾರದು? ದಯವಿಟ್ಟು ಈ ಬಗ್ಗೆ ಸಚಿವರಾದ ಡಿಕೆಶಿಯವರು ಯೋಚಿಸಲೇಬೇಕು.

ಎಲ್ಲಾ ಇಲಾಖೆಗಳ ಮಂತ್ರಿಗಳೂ ತಮ್ಮ ತಮ್ಮ ಇಲಾಖೆಯಲ್ಲಿನ ಬಡ ಹಂಗಾಮಿ ಕಾರ್ಮಿಕರ ಕಷ್ಟ-ಕಾರ್ಪಣ್ಯಗಳನ್ನು ಖುದ್ದು ಪರಿಶೀಲಿಸಿ ಪ್ರಾಮಾಣಿಕವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇ ಆದಲ್ಲಿ, ನಿಶ್ಚಿತವಾಗಿಯೂ ಸರಕಾರಿ ವಲಯದಿಂದ ಈ ದುಷ್ಟ ಪದ್ಧತಿಯನ್ನು ತೆಗೆದುಹಾಕಲು ಸಾಧ್ಯವಿದೆ. ಇದು ಸಾಧ್ಯವಾದಲ್ಲಿ ಈಗಾಗಲೇ ಖಾಸಗೀಕ್ಷೇತ್ರದಲ್ಲಿ ರಾಕ್ಷಸಾವತಾರದಂತೆ ಆಕ್ರಮಿಸಿಕೊಂಡಿರುವ ಮತ್ತು ಉದ್ಯೋಗದ ಸಹಜ ಮಾದರಿಯಂತಾಗಿರುವ ಜೀವವಿರೋಧಿ ಹೊರಗುತ್ತಿಗೆ ಕಾರ್ಮಿಕ ಪದ್ಧತಿಯ ಕರಾಳ ಶೋಷಣೆಯನ್ನು ಕಟ್ಟುನಿಟ್ಟಿನ ನಿಯಂತ್ರಣಕ್ಕೂ ಒಳಪಡಿಸಲು ಸಾಧ್ಯವಿದೆ. ಕೆಳಹಂತದ ಬಡ/ಕಾರ್ಮಿಕರ ಸೇವೆಗೆ ಭದ್ರತೆ ಒದಗಿಸುವುದು ಸಂವಿಧಾನಬದ್ಧ ಮಾತ್ರವಲ್ಲ ಮಾನವೀಯ ಕೆಲಸವೂ ಆಗಿದೆ. ಬಡವರ ಪರ ಸರಕಾರ ನಡೆಸುವುದೆಂದರೆ ಅದರ ನಿಜವಾದ ಅರ್ಥವು ಬಡಕಾರ್ಮಿಕರಿಗೆ ಅವರು ಕೇಳುವ ಸೌಲಭ್ಯವನ್ನು ಒದಗಿಸಿಕೊಡುವುದೇ ಆಗಿದೆ.

ಯಾರೇ ಆಗಲಿ, ಕೇವಲ ಧರ್ಮರಾಯನ ಡೈಲಾಗುಗಳನ್ನು ಹೊಡೆಯುವುದರ ಮೂಲಕ ಮಾತ್ರವೇ ಧರ್ಮರಾಯ ಆಗಲು ಸಾಧ್ಯವಿಲ್ಲ. ನಡವಳಿಕೆಯಲ್ಲಿ ಧರ್ಮರಾಯನನ್ನು ಅನುಸರಿಸಬೇಕಲ್ಲವೇ?

Writer - ಅಯ್ಯಪ್ಪ ಹೂಗಾರ್, ಮೈಸೂರು

contributor

Editor - ಅಯ್ಯಪ್ಪ ಹೂಗಾರ್, ಮೈಸೂರು

contributor

Similar News