ಹೆಡ್ಗೇವಾರ್ ಸುತ್ತೋಲೆ ತಿರುಚಿ ತ್ರಿವರ್ಣ ಧ್ವಜದೊಂದಿಗೆ ಆರೆಸ್ಸೆಸ್ ಸಂಬಂಧದ ಕಥೆಕಟ್ಟಿದ ಮೋಹನ್ ಭಾಗವತ್

Update: 2018-09-19 11:05 GMT

ಸತ್ಯದ ತಲೆಯ ಮೇಲೆ ಹೊಡೆದಂತೆ ವಾಸ್ತವವನ್ನು ತಿರುಚಿ, ರಾಷ್ಟ್ರಧ್ವಜದೊಂದಿಗಿನ ಸಂಬಂಧದ ಬಗ್ಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸುಳ್ಳು ಪ್ರತಿಪಾದನೆ ಮಾಡಿದ್ದಾರೆ. ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಸಂಸ್ಥಾಪಕ ಡಾ.ಕೆ.ಬಿ.ಹೆಡ್ಗೇವಾರ್ 1930ರ ಜನವರಿ 21ರ ಸುತ್ತೋಲೆಯ ತಪ್ಪು ರೂಪವನ್ನು ಬಿಂಬಿಸಿದ್ದಾರೆ. ವಾಸ್ತವವಾಗಿ ಈ ಸುತ್ತೋಲೆಯ ಪ್ರಕಾರ ಆರೆಸ್ಸೆಸ್ ರಾಷ್ಟ್ರಧ್ವಜಕ್ಕೆ ನಿಷ್ಠೆ ವ್ಯಕ್ತಪಡಿಸುವ ಬದಲು, ತಿರಂಗದಿಂದ ಅಂತರ ಕಾಯ್ದುಕೊಂಡು ತನ್ನದೇ ಆದ ಭಗವಾಧ್ವಜ ಅಥವಾ ಕೇಸರಿ ಧ್ವಜವನ್ನು ಆರಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ.

2018ರ ಸೆಪ್ಟೆಂಬರ್ 17ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ "ಭಾರತದ ಭವಿಷ್ಯದ ಬಗೆಗೆ ಆರೆಸ್ಸೆಸ್ ದೃಷ್ಟಿಕೋನ" ವಿಚಾರ ಸಂಕಿರಣದಲ್ಲಿ ಮಾತನಾಡಿದ ಮೋಹನ್ ಭಾಗವತ್, "ಪೂರ್ಣಸ್ವರಾಜ್ಯ ನಿರ್ಣಯವನ್ನು ಕಾಂಗ್ರೆಸ್ ಅಂಗೀಕರಿಸಿದಾಗ, ಎಲ್ಲ ಆರೆಸ್ಸೆಸ್ ಶಾಖೆಗಳು ತ್ರಿವರ್ಣ ಧ್ವಜದೊಂದಿಗೆ ಪಥಸಂಚನ ನಡೆಸಬೇಕು ಎಂದು ಡಾ.ಸಾಹೇಬ್ (ಹೆಡ್ಗೇವಾರ್) ಸುತ್ತೋಲೆ ಹೊರಡಿಸಿದ್ದರು" ಎಂದು ಹೇಳಿದ್ದಾರೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್ 1929ರ ಡಿಸೆಂಬರ್ 19ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಕೈಗೊಂಡ ನಿರ್ಣಯವನ್ನು ಭಾಗವತ್ ಉಲ್ಲೇಖಿಸಿದ್ದರು. ಭಾರತದ ರಾಷ್ಟ್ರೀಯವಾದಿಗಳು, ಬ್ರಿಟಿಷ್ ಸಾಮ್ರಾಜ್ಯದಿಂದ ಮುಕ್ತವಾದ ಸಂಪೂರ್ಣ ಸ್ವಯಂ ಆಡಳಿತಕ್ಕೆ ಹೋರಾಡಬೇಕು ಎಂದು ಈ ನಿರ್ಣಯದಲ್ಲಿ ಸೂಚಿಸಲಾಗಿತ್ತು. ಇದಾದ ಬಳಿಕ ಜವಾಹರಲಾಲ್ ನೆಹರೂ ಅವರು, ಲಾಹೋರ್‍ನಲ್ಲಿ 1929ರ ಡಿಸೆಂಬರ್ 31ರಂದು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. 1930ರ ಜನವರಿ 26ನ್ನು ಸ್ವಾತಂತ್ರ್ಯ ದಿನವಾಗಿ ಎಲ್ಲ ಭಾರತೀಯರು ಆಚರಿಸುವಂತೆಯೂ ಕಾಂಗ್ರೆಸ್ ಕರೆ ನೀಡಿತ್ತು.

ಈ ಬೆಳವಣಿಗೆಗೆ ಸ್ಪಂದಿಸಿದ ಹೆಡ್ಗೇವಾರ್, 1930ರ ಜನವರಿ 21ರಂದು ಸುತ್ತೋಲೆ ಹೊರಡಿಸಿ, ಜನವರಿ 26ರಂದು ಎಲ್ಲ ಆರೆಸ್ಸೆಸ್ ಶಾಖೆಗಳು ಸ್ವಯಂಸೇವಕರ ಸಭೆ ನಡೆಸುವ ಮತ್ತು ತ್ರಿವರ್ಣಧ್ವಜಕ್ಕೆ ಬದಲಾಗಿ ಭಗವಾಧ್ವಜಕ್ಕೆ ರಾಷ್ಟ್ರಧ್ವಜದ ಗೌರವ ಸಲ್ಲಿಸುವ ಮೂಲಕ ಕಾಂಗ್ರೆಸ್ ಕೈಗೊಂಡ ಪೂರ್ಣಸ್ವರಾಜ್ಯ ನಿರ್ಣಯವನ್ನು ಸ್ವಾಗತಿಸಬೇಕು ಎಂದು ಸೂಚಿಸಿದರು.

"ಈ ವರ್ಷ ಕಾಂಗ್ರೆಸ್, ಸ್ವಾತಂತ್ರ್ಯವನ್ನು ತನ್ನ ಗುರಿಯಾಗಿಸುವ ನಿರ್ಣಯ ಕೈಗೊಂಡಿದೆ. ಹಿಂದೂಸ್ತಾನದಾದ್ಯಂತ 21-01-1930ರಂದು ಸ್ವಾತಂತ್ರ್ಯ ದಿನ ಆಚರಿಸಲಾಗುವುದು ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಘೋಷಿಸಿದೆ. ಆದ್ದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲ ಶಾಖೆಗಳು 21-1-30ರಂದು ಸಂಜೆ 6 ಗಂಟೆಗೆ ತಮ್ಮ ಸ್ವಯಂಸೇವಕರ ಸಭೆಯನ್ನು ಆಯಾ ಸಂಘದ ಆವರಣದಲ್ಲಿ ಆಯೋಜಿಸಬೇಕು ಮತ್ತು ರಾಷ್ಟ್ರಧ್ವಜವನ್ನು ಅಂದರೆ ಕೇಸರಿ ಧ್ವಜವನ್ನು ಪೂಜಿಸಬೇಕು" ಎಂದು ಆರೆಸ್ಸೆಸ್ ಸುತ್ತೋಲೆ ತಿಳಿಸಿತ್ತು.

ಈ ಮೂಲ ಸುತ್ತೋಲೆ ಮರಾಠಿಯಲ್ಲಿದ್ದು, ಎನ್.ಎಚ್.ಪಾಲ್ಕರ್ ಅವರು ಪ್ರಕಟಿಸಿದ ಹೆಡ್ಗೇವಾರ್ ಅವರ ಆಯ್ದ ಪತ್ರಗಳು ಎಂಬ ಸಂಕಲನದಲ್ಲಿ, ಹಿಂದಿ ತರ್ಜುಮೆಯನ್ನು ನೀಡಲಾಗಿದೆ. "ಡಾ.ಹೆಡ್ಗೇವಾರ್: ಪತ್ರರೂಪ್ ವ್ಯಕ್ತಿದರ್ಶನ್" 1989ರಲ್ಲಿ ಪ್ರಕಟವಾಗಿದ್ದು, ಇದಕ್ಕೆ ಪಾಲ್ಕರ್ ಅವರ ಪೀಠಿಕೆ ಇದೆ. ಆರೆಸ್ಸೆಸ್‍ನ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಇವರು, ಹೆಡ್ಗೇವಾರ್ ಅವರ ವ್ಯಕ್ತಿಚಿತ್ರ ಬರೆದ ಮೊದಲಿಗರು ಎನಿಸಿಕೊಂಡಿದ್ದರು. ಈ ಮೊದಲ ಕೃತಿಯನ್ನು ಡಾ. ಹೆಡ್ಗೇವಾರ್ ನಿಧನದ ಬಳಿಕ 1964ರಲ್ಲಿ ಪ್ರಕಟಿಸಲಾಗಿತ್ತು. ಹೆಡ್ಗೇವಾರ್ ಅವರ ಉತ್ತರಾಧಿಕಾರಿ ಎಂ.ಎಸ್.ಗೋಳ್ವಾಲ್ಕರ್ ಇದಕ್ಕೆ ಮುನ್ನುಡಿ ಬರೆದಿದ್ದರು. ಪಾಲ್ಕರ್ ಬಗ್ಗೆ ಬರೆಯುತ್ತಾ, "ಬಾಲ್ಯದಿಂದಲೂ ಆರೆಸ್ಸೆಸ್‍ಗೆ ಸಮರ್ಪಿಸಿಕೊಂಡ ಕಾರ್ಯಕರ್ತ" ಎಂದು ಗೋಲ್ವಾಳ್ಕರ್ ಗುಣಗಾನ ಮಾಡಿದ್ದರು.

1930ರ ಸುತ್ತೋಲೆಯ ಅಂಶಗಳನ್ನು ಭಾಗವತ್ ವಿರೂಪಗೊಳಿಸಿರುವುದು, ವಿಜ್ಞಾನ ಭವನ ಸಮಾರಂಭದ ಮೂಲಕ ಪ್ರಮುಖ ಸೈದ್ಧಾಂತಿಕ ವಿಷಯಗಳ ಬಗ್ಗೆ ಪ್ರಚಾರಕರಿಂದಲೇ ಟೀಕೆಗಳು ಬಂದಿದ್ದು, ಸಂಘದ ನಿಲುವನ್ನು ವಿವರಿಸುವ ಕಾರ್ಯತಂತ್ರದ ಭಾಗ ಎನ್ನಲಾಗಿದೆ.

ರಾಷ್ಟ್ರಧ್ವಜದ ಬಗೆಗಿನ ಆರೆಸ್ಸೆಸ್ ನಿಲುವು ಸದಾ ವಿವಾದಾತ್ಮಕ ವಿಚಾರವಾಗಿಯೇ ಉಳಿದಿದೆ. ಸ್ವಾತಂತ್ರ್ಯ ಬಂದು 50 ವರ್ಷ ಕಳೆದರೂ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ನಡೆಯದಿರುವ ಬಗ್ಗೆ 2017ರ ಜನವರಿಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. "ಸ್ವಾತಂತ್ರ್ಯ ಬಂದು 52 ವರ್ಷಗಳ ಬಳಿಕವೂ ನಾಗ್ಪುರದಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಇಲ್ಲ. ಅವರು ಕೇಸರಿ ಧ್ವಜಕ್ಕೇ ಧ್ವಜವಂದನೆ ಸಲ್ಲಿಸುತ್ತಾರೆಯೇ ವಿನಃ ರಾಷ್ಟ್ರಧ್ವಜಕ್ಕಲ್ಲ" ಎಂದು ಟೀಕಿಸಿದ್ದರು.

ಅವರ ಆರೋಪ ಆಧಾರರಹಿತವಲ್ಲ. ಹಿಂದೆಯೂ ಹಲವು ಬಾರಿ, ಆರೆಸ್ಸೆಸ್ ತ್ರಿವರ್ಣ ಧ್ವಜದ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿತ್ತು. ಕೇಸರಿ ಬಣ್ಣ ಹಿಂದುತ್ವದ ಜತೆ ಜೋಡಿಕೊಂಡಿರುವುದರಿಂದ ಕೇಸರಿ ಬಣ್ಣವೇ ರಾಷ್ಟ್ರಧ್ವಜವಾಗಬೇಕು ಎಂದೇ ಪ್ರತಿಪಾದಿಸಿತ್ತು.

ಆರೆಸ್ಸೆಸ್ ಮುಖವಾಣಿ ಆರ್ಗನೈಸರ್‍ನ 14ನೇ ಆಗಸ್ಟ್, 1947ರ ಸಂಚಿಕೆಯಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ, "ಅದೃಷ್ಟದಿಂದ ಅಧಿಕಾರಕ್ಕೆ ಬಂದ ಜನ, ನಮ್ಮ ಕೈಗೆ ತ್ರಿವರ್ಣ ಧ್ವಜ ಕೊಡಬಹುದು. ಆದರೆ ಇದನ್ನು ಎಂದೂ ಹಿಂದೂಗಳು ಗೌರವಿಸಿಲ್ಲ ಮತ್ತು ಇದರ ಒಡೆತನವೂ ಹೊಂದಿರಲಿಲ್ಲ. "ಮೂರು" ಎಂಬ ಸಂಖ್ಯೆಯೇ ಅನಿಷ್ಟ ಮತ್ತು ಮೂರು ಬಣ್ಣಗಳನ್ನು ಹೊಂದಿರುವ ರಾಷ್ಟ್ರಧ್ವಜ ಖಂಡಿತವಾಗಿಯೂ ತೀರಾ ಕೆಟ್ಟ ಮಾನಸಿಕ ಪರಿಣಾಮವನ್ನು ಬೀರುತ್ತದೆ ಹಾಗೂ ನಮ್ಮ ದೇಶವನ್ನು ಘಾಸಿಗೊಳಿಸುತ್ತದೆ" ಎಂದು ಹೇಳಲಾಗಿತ್ತು.

ಅಂತೆಯೇ, "ಬಂಚ್ ಆಫ್ ಥಾಟ್ಸ್" ಕೃತಿಯಲ್ಲಿ ಗೋಲ್ವಾಳ್ಕರ್ ಅವರು, "ನಮ್ಮ ನಾಯಕರು ದೇಶಕ್ಕೆ ಹೊಸ ಧ್ವಜವನ್ನು ರೂಪಿಸಿದ್ದಾರೆ. ಅವರು ಹೀಗೇಕೆ ಮಾಡಿದರು?. ಇದು ದಿಕ್ಕುತಪ್ಪುವ ಮತ್ತು ಅನುಕರಿಸುವ ಪ್ರಕರಣವಷ್ಟೇ...ನಮ್ಮದು ವೈಭವದ ಇತಿಹಾಸ ಹೊಂದಿದ ಪ್ರಾಚೀನ ಮತ್ತು ಶ್ರೇಷ್ಠ ರಾಷ್ಟ್ರ. ನಮಗೆ ಸ್ವಂತ ಧ್ವಜ ಇರಲಿಲ್ಲವೇ? ಸಾವಿರಾರು ವರ್ಷಗಳಿಂದ ನಮಗೆ ರಾಷ್ಟ್ರಗೀತೆ ಇರಲಿಲ್ಲವೇ?, ನಿಸ್ಸಂದೇಹವಾಗಿ ಇತ್ತು. ಹಾಗಿದ್ದ ಮೇಲೆ ನಮ್ಮ ಮನಸ್ಸಿನಲ್ಲಿ ಏಕೀ ದಟ್ಟ ಶೂನ್ಯ?" ಎಂದಿದ್ದರು.

ಭಾಗವತ್ ತಮ್ಮ ಭಾಷಣದಲ್ಲಿ ತಿರಂಗ ಮತ್ತು ಭಗವಾಧ್ವಜ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ. ಭಗವಾಧ್ವಜವನ್ನು ಸ್ವಯಂಸೇವಕರು "ಗುರು" ಎಂಬ ಭಾವನೆಯಿಂದ ಪೂಜಿಸುತ್ತಾರೆ. ಇದಕ್ಕೆ ಅವರು ಪ್ರತಿವರ್ಷ ಗುರುದಕ್ಷಿಣೆ ನೀಡುತ್ತಾರೆ. ಜತೆಜತೆಗೇ, ಆರೆಸ್ಸೆಸ್ ಸದಾ ರಾಷ್ಟ್ರಧ್ವಜಕ್ಕೆ ಗೌರವ ನೀಡುತ್ತಲೇ ಬಂದಿದೆ ಎಂದು ಪ್ರತಿಪಾದಿಸಿ, ಸುಳ್ಳಿನ ಕಂತೆ ಹೆಣೆದು, ಹೆಡ್ಗೇವಾರ್ ಅವರ 1930ರ ಸುತ್ತೋಲೆಯನ್ನೇ ವಿರೂಪಗೊಳಿಸಿದ್ದಾರೆ.

Writer - ಧೀರೇಂದ್ರ ಕೆ.ಝಾ, caravanmagazine.in

contributor

Editor - ಧೀರೇಂದ್ರ ಕೆ.ಝಾ, caravanmagazine.in

contributor

Similar News