ಲೈಂಗಿಕ ಅಪರಾಧಿಗಳ ರಿಜಿಸ್ಟ್ರಿ ಇಂದು ಬಿಡುಗಡೆ

Update: 2018-09-20 05:10 GMT

ಹೊಸದಿಲ್ಲಿ, ಸೆ.20: ನ್ಯಾಷನಲ್ ರಿಜಿಸ್ಟ್ರಿ ಆಫ್ ಸೆಕ್ಷುವಲ್ ಅಫೆಂಡರ್ಸ್‌ ಇಂದು ಜಾರಿಗೆ ಬರಲಿದೆ. ಈ ರಿಜಿಸ್ಟ್ರಿ ಆರಂಭದ ಮೂಲಕ ಇಂಥ ಅಂಕಿ ಅಂಶಗಳನ್ನು ನಿರ್ವಹಿಸುವ ವಿಶ್ವದ ಒಂಬತ್ತನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಭಾರತೀಯ ರಿಜಿಸ್ಟ್ರಿಯಲ್ಲಿ ಅಪರಾಧಿಗಳ ಹೆಸರು, ಭಾವಚಿತ್ರ, ವಿಳಾಸ, ಬೆರಳಚ್ಚು, ಡಿಎನ್‌ಎ ಮಾದರಿ, ಪಾನ್ ಮತ್ತು ಆಧಾರ್ ಕಾರ್ಡ್‌ಗಳ ವಿವರ ಇರುತ್ತವೆ.

ಲೈಂಗಿಕ ಅಪರಾಧಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಎಲ್ಲರ ಮಾಹಿತಿಗಳು ಇದರಲ್ಲಿರುತ್ತವೆ. ಇದರಲ್ಲಿ 4.5 ಲಕ್ಷಕ್ಕೂ ಅಧಿಕ ಪ್ರಕರಣಗಳು ಸೇರಿವೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೊದಲ ಬಾರಿ ಅಪರಾಧ ಎಸಗಿದವರು ಹಾಗೂ ಪದೇಪದೇ ಲೈಂಗಿಕ ಅಪರಾಧ ಎಸಗಿದವರ ಹೆಸರುಗಳು ಪ್ರತ್ಯೇಕವಾಗಿ ಇರುತ್ತವೆ. ದೇಶಾದ್ಯಂತ ಜೈಲುಗಳು ಕ್ರೋಢೀಕರಿಸಿದ ಮಾಹಿತಿಯನ್ನು ಆಧರಿಸಿ, ಇದನ್ನು ಸಿದ್ಧಪಡಿಸಲಾಗಿದೆ. ಇವರು ಸಮಾಜಕ್ಕೆ ಎಷ್ಟರ ಮಟ್ಟಿಗೆ ಅಪಾಯಕಾರಿ ಎನ್ನುವ ಮಾಹಿತಿಯನ್ನು ಕೂಡಾ, ಅವರ ಅಪರಾಧ ಇತಿಹಾಸವನ್ನು ವಿಶ್ಲೇಷಿಸಿ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಾಹಿತಿಗಳನ್ನು ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ನಿರ್ವಹಿಸಲಿದೆ. ಕಾನೂನು ಜಾರಿ ಸಂಸ್ಥೆಗಳು ಹಲವು ಉದ್ದೇಶಗಳಿಗೆ ಇದನ್ನು ಬಳಸಿಕೊಳ್ಳಲಿವೆ. ತನಿಖೆ ಹಾಗೂ ಉದ್ಯೋಗಿ ದಾಖಲೆಗಳ ಪರಿಶೀಲನೆಗೂ ಇದನ್ನು ಬಳಸಿಕೊಳ್ಳಬಹುದು ಎಂದು ವಿವರಿಸಿವೆ.

ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ನ್ಯೂಝಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಟ್ರಿನಿಡಾಡ್ ಆ್ಯಂಡ್ ಟೊಬಾಗೊ ಈಗಾಗಲೇ ಇಂಥ ರಿಜಿಸ್ಟ್ರಿ ನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News