ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ಇನ್ನಿಲ್ಲ

Update: 2018-09-20 12:33 GMT

ಬೆಂಗಳೂರು, ಸೆ. 20: ಕನ್ನಡ ಚಿತ್ರರಂಗದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು (90) ವಯೋಸಹಜ ಕಾಯಿಲೆ ಹಿನ್ನೆಲೆಯಲ್ಲಿ ನಿನ್ನೆ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಗುರುವಾರ ಇಲ್ಲಿನ ಬನಶಂಕರಿಯ ಚಿತಾಗಾರದಲ್ಲಿ ನಡೆಸಲಾಯಿತು.

ಸದಾಶಿವ ಬ್ರಹ್ಮಾವರ ಅವರು ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ತನ್ನ ಸಾವಿನ ಸುದ್ದಿಯನ್ನು ಯಾರಿಗೂ ತಿಳಿಸಬಾರದೆಂದು ಮಕ್ಕಳಲ್ಲಿ ಬ್ರಹ್ಮಾವರ್ ಅವರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಗೌಪ್ಯವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆಂದು ಗೊತ್ತಾಗಿದೆ.

ತಮ್ಮ ಪೋಷಕ ಪಾತ್ರಗಳ ಮೂಲಕ ಬಹುಕಾಲ ಚಿತ್ರರಂಗವನ್ನ್ನು ಆಳಿದ ಸದಾಶಿವ ಬ್ರಹ್ಮಾವರ ಅವರು, ಬೆಟ್ಟದ ಹೂ, ಕನಸೆಂಬ ಕುದುರೆಯನೇರಿ, ಸ್ವಾತಿಮುತ್ತು, ಮನೆದೇವ್ರ, ಗೋಲಿಬಾರ್, ಹಳ್ಳಿಮೇಷ್ಟ್ರು, ಹಾಲುಂಡ ತವರು, ಗೂಂಡಾರಾಜ್ಯ, ಚಕ್ರವರ್ತಿ, ಆಟಬೊಂಬಾಟ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

1980ರಲ್ಲಿ ನಟನೆ ಆರಂಭಿಸಿದ ಬ್ರಹ್ಮಾವರ ಅವರು, ವರನಟ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಕಿಚ್ಚ ಸುದೀಪ್ ಸೇರಿದಂತೆ ಹಲವು ಹಿರಿ- ಕಿರಿಯ ನಟರೊಂದಿಗೆ ಅಭಿನಯಿಸಿದ್ದು, ತಮ್ಮ ಅಭಿನಯದ ಮೂಲಕವೇ ದೇಶದ ಗಮನ ಸೆಳೆದಿದ್ದ ಅಪರೂಪದ ನಟ ಎಂದರೆ ಉತ್ಪ್ರೇಕ್ಷೆಯಲ್ಲ.

ಶ್ರೀಯುತರ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News