ನನ್ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ್ದ ಶಾಸಕನಿಗೆ ಮತ್ತೆ ಎನ್‌ಸಿಡಬ್ಲ್ಯು ಸಮನ್ಸ್

Update: 2018-09-20 14:29 GMT

ಹೊಸದಿಲ್ಲಿ,ಸೆ.20: ಜಲಂಧರ್ ಬಿಷಪ್ ಫ್ರಾಂಕೊ ಮುಳಕ್ಕಲ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿರುವ ಕ್ರೈಸ್ತ ಸನ್ಯಾಸಿನಿಯ ವಿರುದ್ಧ ನಿಂದನಾತ್ಮಕ ಭಾಷೆಯನ್ನು ಬಳಸಿದ್ದಕ್ಕಾಗಿ ಅ.4ರಂದು ತನ್ನ ಮುಂದೆ ಹಾಜರಾಗುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು)ವು ಕೇರಳದ ಶಾಸಕ ಪಿ.ಸಿ.ಜಾರ್ಜ್ ಅವರಿಗೆ ಹೊಸದಾಗಿ ಸಮನ್ಸ್ ಹೊರಡಿಸಿದೆ.

  ಗುರುವಾರ ತನ್ನೆದುರು ಹಾಜರಾಗುವಂತೆ ಆಯೋಗವು ಈ ಹಿಂದೆ ಜಾರ್ಜ್‌ಗೆ ನಿರ್ದೇಶ ನೀಡಿತ್ತು. ಸೆ.17ರಷ್ಟೇ ಸಮನ್ಸ್ ತನ್ನ ಕೈಸೇರಿದೆ ಮತ್ತು ಶಾಸಕನಾಗಿ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಹಾಗೂ ನೆರೆ ಪರಿಹಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದರಿಂದ ಇಷ್ಟು ಅಲ್ಪಾವಧಿಯಲ್ಲಿ ದಿಲ್ಲಿಗೆ ಬರಲು ತನಗೆ ಸಾಧ್ಯವಿಲ್ಲ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರಿಗೆ ಬರೆದಿರುವ ಪತ್ರದಲ್ಲಿ ಜಾರ್ಜ್ ತಿಳಿಸಿದ್ದರು.

ಕೇರಳ ವಿಧಾನಸಭೆಯಲ್ಲಿ ಏಕೈಕ ಪಕ್ಷೇತರ ಶಾಸಕನಾಗಿರುವ ಜಾರ್ಜ್ ಈ ಹಿಂದೆ ಕ್ರೈಸ್ತ ಸನ್ಯಾಸಿನಿಯ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ ಸಂದರ್ಭದಲ್ಲಿ, ಅವರು ತನ್ನ ಮೇಲಿನ ಅತ್ಯಾಚಾರ ಘಟನೆಯನ್ನು ಮೊದಲೇ ವರದಿ ಮಾಡದಿದ್ದರ ಹಿಂದಿನ ಕಾರಣವೇನು ಎಂದು ಪ್ರಶ್ನಿಸಿದ್ದರು.

ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಇಂತಹ ಆಕ್ಷೇಪಾರ್ಹ ಮತ್ತು ಅವಮಾನಕಾರಿ ಭಾಷೆಯನ್ನು ಬಳಸುತ್ತಿರುವುದು ತನಗೆ ನಾಚಿಕೆಯನ್ನುಂಟು ಮಾಡಿದೆ ಎಂದು ಶರ್ಮಾ ಪ್ರತಿಕ್ರಿಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News