ಸೆಪ್ಟಂಬರ್ 29ನ್ನು ‘ಸರ್ಜಿಕಲ್ ಸ್ಟ್ರೈಕ್ ದಿನ’ ಎಂದು ಆಚರಿಸಲು ವಿವಿಗಳಿಗೆ ಯುಜಿಸಿ ಸೂಚನೆ

Update: 2018-09-20 14:51 GMT

ಹೊಸದಿಲ್ಲಿ, ಸೆ.20: ಸೆಪ್ಟಂಬರ್ 29ನ್ನು ‘ಸರ್ಜಿಕಲ್ ಸ್ಟ್ರೈಕ್’ ದಿನವನ್ನಾಗಿ ಆಚರಿಸಲು ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಅನುದಾನಗಳ ಆಯೋಗ (ಯುಜಿಸಿ) ಗುರುವಾರ ನಿರ್ದೇಶಿಸಿದೆ. ಆ ದಿನದಿಂದು ಸಶಸ್ತ್ರಪಡೆಗಳ ತ್ಯಾಗಗಳ ಬಗ್ಗೆ ನಿವೃತ್ತ ಯೋಧರ ಜೊತೆ ಸಂವಾದ ಕಾರ್ಯಕ್ರಮಗಳು, ವಿಶೇಷ ಪಥಸಂಚಲನಗಳು, ವಸ್ತುಪ್ರದರ್ಶನಗಳಿಗೆ ಭೇಟಿ ನೀಡುವುದು ಮತ್ತು ಸಶಸ್ತ್ರಪಡೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಶುಭಾಶಯ ಪತ್ರಗಳನ್ನು ಕಳುಹಿಸುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುವಂತೆ ಯುಜಿಸಿ ಸೂಚಿಸಿದೆ.

ಸೆಪ್ಟಂಬರ್ 29ರಂದು ಎಲ್ಲ ವಿಶ್ವವಿದ್ಯಾನಿಲಯಗಳ ಎನ್‌ಸಿಸಿ ವಿಭಾಗಗಳು ವಿಶೇಷ ಪಥಸಂಚಲನವನ್ನು ನಡೆಸಬೇಕು ಮತ್ತು ಎನ್‌ಸಿಸಿಯ ಕಮಾಂಡರ್‌ಗಡಿಗಳ ರಕ್ಷಣೆಯ ಬಗ್ಗೆ ಅವರಿಗೆ ತಿಳಿಸಬೇಕು. ಸಶಸ್ತ್ರಪಡೆಗಳು ಮಾಡಿರುವ ತ್ಯಾಗಗಳನ್ನು ವಿದ್ಯಾರ್ಥಿಗಳ ಅರಿವಿಗೆ ತರುವ ಸಲುವಾಗಿ ವಿಶ್ವವಿದ್ಯಾನಿಲಯಗಳು ನಿವೃತ್ತ ಯೋಧರ ಜೊತೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಯುಜಿಸಿ ಸೂಚಿಸಿದೆ.

ಆ ದಿನ ಇಂಡಿಯಾ ಗೇಟ್ ಬಳಿ ಮಲ್ಟಿಮೀಡಿಯ ಪ್ರದರ್ಶನವನ್ನು ಆಯೋಜಿಸಲಾಗುವುದು. ಇಂಥ ಪ್ರದರ್ಶನಗಳನ್ನು ದೇಶಾದ್ಯಂತ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಪ್ರಮುಖ ಪಟ್ಟಣಗಳು ಮತ್ತು ನಗರಗಳಲ್ಲೂ ಆಯೋಜಿಸಬಹುದು. ಈ ಪ್ರದರ್ಶನಗಳಿಗೆ ತೆರಳಲು ವಿದ್ಯಾರ್ಥಿಗಳು ಮತ್ತು ಶಿಕ್ಷಕವರ್ಗವನ್ನು ಸಂಸ್ಥೆಯು ಪ್ರೇರೇಪಿಸಬೇಕು ಎಂದು ಆಯೋಗ ತಿಳಿಸಿದೆ. 2016ರ ಸೆಪ್ಟಂಬರ್ 29ರಂದು ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಗಿಂತ ಆಚೆಗಿದ್ದ ಏಳು ಉಗ್ರರ ತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಉಗ್ರರರನ್ನು ಹೊಡೆದುರುಳಿಸಿತ್ತು. ಜೊತೆಗೆ ಪಾಕ್ ಸೇನೆಗೆ ಹಾಗೂ ಉಗ್ರರಿಗೆ ಅಪಾರ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News