ಕೆಮ್ಮಿನ ಸಿರಫ್ ವ್ಯಸನಿ ಬಾಲ ಕೈದಿಗಳಿಂದ ವಾರ್ಡನ್, ಬಾಲಕನ ಹತ್ಯೆ

Update: 2018-09-20 14:55 GMT

ಪುರ್ನಿಯಾ (ಬಿಹಾರ್), ಸೆ. 20: ಬಿಹಾರದ ಪುರ್ನಿಯಾ ರಿಮಾಂಡ್ ಹೋಮ್‌ನಲ್ಲಿ ಐವರು ಬಾಲ ಕೈದಿಗಳು ಬುಧವಾರ ಉಸ್ತುವಾರಿ ನೋಡಿಕೊಳ್ಳುತ್ತಿರುವ ವ್ಯಕ್ತಿ ಹಾಗೂ ಸಹ ಕೈದಿಯನ್ನು ಹತ್ಯೆನಡೆಸಿ ಪರಾರಿಯಾಗಿದ್ದಾರೆ.

ರಿಮಾಂಡ್ ಹೋಮ್‌ನಲ್ಲಿ ಇದ್ದ ಐವರ ಬಾಲಕರ ಗುಂಪು ಕಾರಾಗೃಹದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿಜೇಂದ್ರ ಕುಮಾರ್ ಹಾಗೂ ಸಹ ಕೈದಿ ಸರೋಜ್ ಕುಮಾರ್ ಅವರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಗೌರವ್ ಸಹಾನಿ ಹಾಗೂ ರೋಹಿತ್ ಕುಮಾರ್ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಬಾಲಕರ ತಂಡ ಕಾರಾಗೃಹದ ಗೇಟು ತೆರೆದು ಪರಾರಿಯಾಗಿದೆ ಎಂದು ಪೊಲೀಸ್ ಅಧೀಕ್ಷಕ ವಿಶಾಲ್ ಶರ್ಮಾ ತಿಳಿಸಿದ್ದಾರೆ.

ಪರಾರಿಯಾದ ಕೈದಿಗಳಲ್ಲಿ ಓರ್ವ ಜೆಡಿಯುನ ಸ್ಥಳೀಯ ನಾಯಕನ ಪುತ್ರ. ಇನ್ನೋರ್ವ ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಎಂದು ಪೊಲೀಸರು ತಿಳಿಸಿದ್ದಾರೆ. ರಿಮಾಂಡ್ ಹೋಮ್‌ನಿಂದ ಐವರು ಬಾಲ ಕೈದಿಗಳು ಪರಾರಿಯಾಗಿದ್ದಾರೆ ಎಂದು ರಿಮಾಂಡ್ ಹೋಮ್‌ನ ಗಾರ್ಡ್ ಸೂರಜ್ ಕುಮಾರ್ ಹೇಳಿದ್ದಾರೆ. ಬಾಲ ಕೈದಿಗಳಿಗೆ ಗನ್ ಎಲ್ಲಿಂದ ಲಭ್ಯವಾಯಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಅಮಲು ಪದಾರ್ಥವಾಗಿ ಬಳಸುತ್ತಿದ್ದ ಕೆಮ್ಮಿನ ಸಿರಫ್ ಅನ್ನು ಜೈಲಿನ ಉಸ್ತುವಾರಿ ವಿಜೇಂದ್ರ ಕುಮಾರ್ ಪತ್ತೆ ಹಚ್ಚಿದ್ದರು. ಅಲ್ಲದೆ ಸ್ಥಳೀಯ ಬಾಲ ನ್ಯಾಯ ಮಂಡಳಿ ಸಂಪರ್ಕಿಸಿ ಈ ಬಾಲಕನ್ನು ಬೇರೆಂದು ರಿಮಾಂಡ್ ಹೋಮಂಗೆ ವರ್ಗಾಯಿಸುವಂತೆ ಅವರು ಆಗ್ರಹಿಸಿದ್ದರು. ಈ ಮನವಿಗೆ ಮಂಡಳಿ ಬುಧವಾರ ಒಪ್ಪಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಾಲಕರ ಗುಂಪು ಆಕ್ರೋಶಿತಗೊಂಡಿತ್ತು. ಇದೇ ಕಾರಣಕ್ಕೆ ಕುಮಾರ್ ಹಾಗೂ ಸರೋಜ್ ಅವರನ್ನು ಬಾಲಕರ ಗುಂಪು ಹತ್ಯೆಗೈದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News