ಭೀಮಾ ಕೋರೆಗಾಂವ್ ಪ್ರಕರಣ: ಬಂಧಿತ ಐವರು ಮಾನವ ಹಕ್ಕು ಹೋರಾಟಗಾರರ ತೀರ್ಪು ಖಾದಿರಿಸಿದ ಸುಪ್ರೀಂ ಕೋರ್ಟ್

Update: 2018-09-20 15:04 GMT

ಹೊಸದಿಲ್ಲಿ, ಸೆ. 20: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಐವರು ಮಾನವ ಹಕ್ಕು ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ ಅವರ ಬಂಧನದ ಬಗ್ಗೆ ವಿಶೇಷ ತನಿಖಾ ಸಂಸ್ಥೆ (ಸಿಟ್)ಯಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಇತಿಹಾಸಕಾರ್ತಿ ರೋಮಿಲಾ ಥಾಪರ್ ಹಾಗೂ ಇತರರು ಸಲ್ಲಿಸಿದ ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾದಿರಿಸಿದೆ.

 ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಹರೀಶ್ ಸಾಳ್ವೆ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಒಳಗೊಂಡ ಎರಡು ಕಡೆಯ ವಕೀಲರ ಪ್ರತಿಪಾದನೆ ಬಳಿಕ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ತೀರ್ಪನ್ನು ಖಾದಿರಿಸಿತು. ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಕೇಸ್ ಡೈರಿಯನ್ನು ಸೆಪ್ಟಂಬರ್ 24ರ ಒಳಗೆ ಸಲ್ಲಿಸುವಂತೆ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಢ ಅವರನ್ನು ಕೂಡ ಒಳಗೊಂಡ ಪೀಠ ಮಹಾರಾಷ್ಟ್ರ ಪೊಲೀಸರಿಗೆ ತಿಳಿಸಿದೆ.

ಮಾನವ ಹಕ್ಕು ಹೋರಾಟಗಾರರಾದ ವರವರ ರಾವ್, ಅರುಣ್ ಫೆರೇರಾ, ವೆರ್ನನ್ ಗೊನ್ಸಾಲ್ವೆಸ್, ಸುಧಾ ಭಾರದ್ವಾಜ್ ಹಾಗೂ ಗೌತಮ್ ನೌಲಾಖಾ ಅವರನ್ನು 29ರಂದು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಬಂಧನದ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ಹಾಗೂ ಮಾವ ಹಕ್ಕು ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಇತಿಹಾಸಕಾರ್ತಿ ರೋಮಿಲಾ ಥಾಪರ್, ಆರ್ಥಿಕ ತಜ್ಞರಾದ ಪ್ರಭಾತ್ ಪಟ್ನಾಯಕ್, ದೇವಿಕಾ ಜೈನ್, ಸಾಮಾಜಶಾಸ್ತ್ರ ಅಧ್ಯಾಪಕ ಸತೀಶ್ ದೇಶಪಾಂಡೆ ಹಾಗೂ ವಕೀಲ ಮಾಜಾ ದರುವಾಲ ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News