×
Ad

ಜಾಹೀರಾತಿನಲ್ಲಿ ಹಿಂದೂ ಭಾವನೆಗೆ ಧಕ್ಕೆ: ಕ್ಷಮೆ ಯಾಚಿಸಿದ ಅಮೆರಿಕದ ರಿಪಬ್ಲಿಕನ್ ಪಕ್ಷ

Update: 2018-09-20 20:36 IST

ಹಾಸ್ಟನ್, ಸೆ.20: ಸುದ್ದಿಪತ್ರಿಕೆಯ ಜಾಹೀರಾತಿನಲ್ಲಿ ಗಣಪತಿಯ ಚಿತ್ರವನ್ನು ಹಾಕುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆಯುಂಟು ಮಾಡಿದ ಕಾರಣಕ್ಕೆ ಅಮೆರಿಕದ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಹಿಂದೂ ಸಮುದಾಯದ ಕ್ಷಮೆ ಯಾಚಿಸಿದೆ.

 ಟೆಕ್ಸಾಸ್‌ನಲ್ಲಿರುವ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಓಲೈಸುವ ಭರದಲ್ಲಿ ಪತ್ರಿಕೆಗೆ ನೀಡಲಾದ ಜಾಹೀರಾತಿನಿಂದ ಈ ಎಡವಟ್ಟು ನಡೆದಿದೆ. ಗಣೇಶ ಚತುರ್ಥಿ ಹಬ್ಬದಂದು ಪ್ರಕಟಿಸಲಾದ ಈ ಜಾಹೀರಾತಿನಲ್ಲಿ ಗಣಪತಿಯ ಚಿತ್ರದ ಕೆಳಗೆ, ನೀವು ಕತ್ತೆಯನ್ನು ಪೂಜಿಸುತ್ತೀರೋ ಅಥವಾ ಆನೆಯನ್ನು? ಆಯ್ಕೆ ನಿಮಗೆ ಬಿಟ್ಟಿದ್ದು ಎಂದು ಬರೆಯಲಾಗಿತ್ತು. ರಿಪಬ್ಲಿಕನ್ ಪಕ್ಷದ ಚಿಹ್ನೆ ಆನೆಯಾಗಿದ್ದರೆ ಡೆಮೊಕ್ರಾಟಿಕ್ ಪಕ್ಷದ ಚಿಹ್ನೆ ಕತ್ತೆಯಾಗಿದೆ. ಈ ಜಾಹೀರಾತಿನಿಂದ ಭಾರತೀಯ-ಅಮೆರಿಕನ್ ಸಮುದಾಯ ಆಕ್ರೋಶಗೊಂಡಿದ್ದು ತನ್ನ ಭಾವನಗೆ ಧಕ್ಕೆಯಾಗಿದೆ ಎಂದು ದೂರಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಈ ಜಾಹೀರಾತನ್ನು ನೀಡಿದ ಪಕ್ಷದ ಫೋರ್ಟ್ ಬೆಂಡ್ ಕೌಂಟಿ ವಿಭಾಗ ಹಿಂದುಗಳ ಕ್ಷಮೆ ಕೇಳಿದೆ. ನಮ್ಮ ಉದ್ದೇಶ ಹಿಂದು ಸಂಪ್ರದಾಯಗಳನ್ನು ಅಥವಾ ಆಚರಣೆಗಳನ್ನು ಅವಮಾನಿಸುವುದು ಆಗಿರಲಿಲ್ಲ ಎಂದು ಪಕ್ಷ ತನ್ನ ಕ್ಷಮೆಯಾಚನೆ ಹೇಳಿಕೆಯಲ್ಲಿ ತಿಳಿಸಿದೆ. ರಾಜಕೀಯ ಲಾಭವನ್ನು ಪಡೆಯಲು ಧಾರ್ಮಿಕ ಚಿಹ್ನೆಗಳನ್ನು ಅಥವಾ ಚಿತ್ರಗಳನ್ನು ಬಳಸುವುದನ್ನು ಎಲ್ಲ ರಾಜಕೀಯ ಪಕ್ಷಗಳು ಬಿಡಬೇಕು ಎಂದು ಹಾಸ್ಟನ್‌ನ ಹಿಂದು-ಅಮೆರಿಕನ್ ಪ್ರತಿಷ್ಠಾನ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News