ಎರಡನೇ ದಿನವೂ ಮುಂದುವರಿದ ಬಿಷಪ್ ವಿಚಾರಣೆ

Update: 2018-09-20 15:30 GMT

ತಿರುವನಂತಪುರ,ಸೆ.20: ಕೇರಳ ಪೊಲೀಸ್‌ನ ವಿಶೇಷ ತನಿಖಾ ತಂಡ(ಸಿಟ್)ವು ಜಲಂಧರ್‌ನ ಬಿಷಪ್ ಫ್ರಾಂಕೊ ಮುಳಕ್ಕಲ್ ಅವರ ವಿಚಾರಣೆಯನ್ನು ಎರಡನೇ ದಿನವಾದ ಗುರುವಾರವೂ ಮುಂದುವರಿಸಿದ್ದು,ಅವರನ್ನು ಬಂಧಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ರಾಜ್ಯದ ಡಿಜಿಪಿ ಲೋಕನಾಥ ಬೆಹ್ರಾ ಅವರು ಇಲ್ಲಿ ತಿಳಿಸಿದರು. ಕೈಸ್ತ ಸನ್ಯಾಸಿನಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನು ಮುಳಕ್ಕಲ್ ಎದುರಿಸುತ್ತಿದ್ದಾರೆ.

  ವಿಚಾರಣೆಯು ಪೂರ್ಣಗೊಂಡ ಬಳಿಕ ಮುಳಕ್ಕಲ್ ಅವರನ್ನು ಬಂಧಿಸಬೇಕೇ ಎಂಬ ಬಗ್ಗೆ ತನಿಖಾಧಿಕಾರಿಗಳು ನಿರ್ಣಯ ಕೈಗೊಳ್ಳಲಿದ್ದಾರೆ. ಖಂಡಿತವಾಗಿಯೂ ಒಂದೆರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರವೊಂದಕ್ಕೆ ಬರುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದ ಬೆಹ್ರಾ,ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ತನಿಖಾಧಿಕಾರಿಗಳು ಸ್ವತಂತ್ರರಿದ್ದಾರೆ ಎಂದರು.

ಮುಳಕ್ಕಲ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯು ಉಚ್ಚ ನ್ಯಾಯಾಲಯದಲ್ಲಿ ಸೆ.25ರಂದು ವಿಚಾರಣೆಗೆ ಬರಲಿದ್ದು,ಅದಕ್ಕೂ ಮೊದಲೇೆ ಅವರನ್ನು ಬಂಧಿಸಲಾಗುವುದೇ ಎಂಬ ಪ್ರಶ್ನೆಗೆ,ಕಾನೂನಿನ ಯಾವುದೇ ಸಮಸ್ಯೆ ಇಲ್ಲವೆಂದು ತಾನು ಭಾವಿಸಿದ್ದೇನೆ. ಜಾಮೀನು ಅರ್ಜಿಯ ವಿಚಾರಣೆ ಬಾಕಿಯಿರುವಾಗ ಬಂಧನವನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಈ ಬಗ್ಗೆ ಕಾನೂನು ತಂಡದೊಡನೆ ಚರ್ಚಿಸುತ್ತೇವೆ ಎಂದು ಅವರು ಉತ್ತರಿಸಿದರು.

ಸೆ.25ರ ಮುನ್ನ ಮುಳಕ್ಕಲ್‌ರನ್ನ ಬಂಧಿಸುವ ಸಾಧ್ಯತೆಗಳು ಕಡಿಮೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಡಿವೈಎಸ್‌ಪಿ ಕೆ.ಸುಭಾಷ್ ನೇತೃತ್ವದ ಸಿಟ್ ಬುಧವಾರ ಏಳು ಗಂಟೆಗಳ ಕಾಲ ಮುಳಕ್ಕಲ್‌ರನ್ನು ವಿಚಾರಣೆಗೊಳಪಡಿಸಿತ್ತು.

ಮುಳಕ್ಕಲ್ ಅವರ ವಿಚಾರಣೆ ನಡೆಯುತ್ತಿದ್ದ ಕೊಚ್ಚಿಯ ಕ್ರೈಂ ಬ್ರಾಂಚ್ ಕಚೇರಿಯೆುದುರು ಪ್ರತಿಭಟನೆ ನಡೆಸಿದ ಎಐಯುಎಫ್ ಕಾರ್ಯಕರ್ತರು ಅವರ ಬಂಧನಕ್ಕೆ ಆಗ್ರಹಿಸಿದರು. ಬುಧವಾರವೂ ಅವರು ಪ್ರತಿಭಟನೆಯನ್ನು ನಡೆಸಿದ್ದರು. ಕೆಲವರು ಮುಳಕ್ಕಲ್ ಅವರ ಪ್ರತಿಕೃತಿಯನ್ನೂ ದಹಿಸಿದರು.

ತನ್ಮಧ್ಯೆ ಮುಳಕ್ಕಲ್ ಬಂಧನದ ಬೇಡಿಕೆಯನ್ನು ಮುಂದಿಟ್ಟುಕೊಂಡು ವಿವಿಧ ಕ್ಯಾಥೊಲಿಕ್ ಸುಧಾರಕ ಸಂಘಗಳು ಮತ್ತು ಕ್ರೈಸ್ತ ಸನ್ಯಾಸಿನಿಯರು ನಡೆಸುತ್ತಿರುವ ಪ್ರತಿಭಟನೆ ಗುರುವಾರ 13 ನೇ ದಿನವನ್ನು ಪ್ರವೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News