ಎಲ್ಲ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳ ಸುರಕ್ಷತೆಯ ಪರಿಶೀಲನೆಗೆ ಸಚಿವ ಪ್ರಭು ಆದೇಶ

Update: 2018-09-20 15:33 GMT

ಹೊಸದಿಲ್ಲಿ,ಸೆ.20: ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದ ಇತ್ತೀಚಿನ ಘಟನೆಗಳ ನಡುವೆಯೇ ನಾಗರಿಕ ವಾಯುಯಾನ ಸಚಿವ ಸುರೇಶ ಪ್ರಭು ಅವರು,ಎಲ್ಲ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಲ್ಲಿಯ ಸುರಕ್ಷತಾ ವ್ಯವಸ್ಥೆಯ ಪರಿಶೋಧನೆ ನಡೆಸುವಂತೆ ಗುರುವಾರ ಆದೇಶಿಸಿದ್ದಾರೆ. ತಕ್ಷಣದಿಂದಲೇ ಈ ಕಾರ್ಯವನ್ನು ಆರಂಭಿಸುವಂತೆ ಮತ್ತು 30 ದಿನಗಳಲ್ಲಿ ತನಗೆ ವರದಿ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

 ಮುಂಬೈನಿಂದ ಜೈಪುರಕ್ಕೆ ಹಾರುತ್ತಿದ್ದ ಜೆಟ್ ಏರ್‌ವೇಸ್ ವಿಮಾನದಲ್ಲಿ ಸಿಬ್ಬಂದಿಗಳು ಕ್ಯಾಬಿನ್‌ನಲ್ಲಿ ಗಾಳಿಯ ಒತ್ತಡವನ್ನು ನಿಯಂತ್ರಿಸುವ ಸ್ವಿಚ್‌ನ್ನು ಆನ್ ಮಾಡಲು ಮರೆತಿದ್ದ ಪರಿಣಾಮ ಹಲವಾರು ಪ್ರಯಾಣಿಕರ ಮೂಗು ಮತ್ತು ಕಿವಿಗಳಲ್ಲಿ ರಕ್ತ ಕಾಣಿಸಿಕೊಂಡಿದ್ದ ದಿನವೇ ಸಚಿವರ ಈ ಆದೇಶ ಹೊರಬಿದ್ದಿದೆ.

ಜೆಟ್ ಏರ್‌ವೇಸ್ ಘಟನೆಯ ಕುರಿತು ವಿಚಾರಣೆಗೂ ಪ್ರಭು ಆದೇಶಿಸಿದ್ದು, ವಿಮಾನ ಅಪಘಾತ ತನಿಖಾ ಘಟಕವು ವಿಚಾರಣೆಯನ್ನು ನಡೆಸುತ್ತಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News